ಕಡಬ: ಪೊಲೀಸರನ್ನು ನೋಡಿ ಬೈಕ್ ನಿಂದ ಇಳಿದು ನಡೆದ ವ್ಯಕ್ತಿಗೆ ದಂಡ !

Update: 2019-09-27 07:02 GMT

ಕಡಬ, ಸೆ. 27: ಬೈಕ್ ಸವಾರನೋರ್ವ ಪೊಲೀಸರನ್ನು ಕಂಡೊಡನೆ ಹಿಂಬದಿ ಸವಾರನನ್ನು ಇಳಿಸಿ ತೆರಳಿದ್ದು, ಈ ವೇಳೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ತಡೆದ ಪೊಲೀಸರು 500 ರೂ. ದಂಡ ವಿಧಿಸಿದ ಘಟನೆ ಶುಕ್ರವಾರ ಕಡಬದಲ್ಲಿ ನಡೆದಿದ್ದು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ದಂಡದ ರಶೀದಿಯನ್ನು ಹಿಂಪಡೆದಿದ್ದಾರೆ.

ಕಡಬದಲ್ಲಿ ಗುರುವಾರ ನಡೆದ ಗೃಹಪ್ರವೇಶಕ್ಕೆಂದು ಕಾಸರಗೋಡಿನಿಂದ ಆಗಮಿಸಿದ್ದ ಯುವಕನನ್ನು ಬಸ್ ನಿಲ್ದಾಣಕ್ಕೆ ಬಿಡಲೆಂದು ಯುವಕನೋರ್ವ ಬೈಕ್ ನಲ್ಲಿ ಕಡಬಕ್ಕೆ ಆಗಮಿಸಿದ್ದು, ಈ ವೇಳೆ ಕಡಬದ ಕಾಲೇಜು ಕ್ರಾಸ್ ಬಳಿ ಹೈವೇ ಪಟ್ರೋಲ್ ವಾಹನ ನಿಂತಿರುವುದನ್ನು ಗಮನಿಸಿದ ಬೈಕ್ ಸವಾರ ಹಿಂಬದಿ ಸವಾರನನ್ನು ಅಲ್ಲೇ ಇಳಿಸಿ ತೆರಳಿದನೆನ್ನಲಾಗಿದೆ. ಇದನ್ನು ಗಮನಿಸಿದ ಪೊಲೀಸ್ ವಾಹನದ ಸಿಬ್ಬಂದಿ ಬೈಕಿನಿಂದ ಇಳಿದ ಯುವಕನನ್ನು ಅವ್ಯಾಚ ಶಬ್ದಗಳಿಂದ ಕರೆದಿದ್ದಾರೆನ್ನಲಾಗಿದ್ದು, ಸವಾರ ಹೆಲ್ಮೆಟ್ ಧರಿಸಿಲ್ಲ ಎಂದು ಆರೋಪಿಸಿ 500 ರೂ. ದಂಡ ವಿಧಿಸಿ ರಶೀದಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕಡಬ ಗ್ರಾ.ಪಂ. ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಹಾಜಿ ಹನೀಫ್ ಕೆ.ಎಂ., ಶರೀಫ್ ಎ.ಎಸ್. ಮೊದಲಾದವರು ಪೊಲೀಸರೊಂದಿಗೆ ಪ್ರಶ್ನಿಸಿದ್ದು, ಆ ಬಳಿಕ ಪೊಲೀಸರು ದಂಡದ ರಶೀದಿಯನ್ನು ಹಿಂಪಡೆದಿದ್ದಾರೆ‌ ಎಂದು ತಿಳಿದುಬಂದಿದೆ.

ಈ ವೇಳೆ ಹೈವೇ ಪಟ್ರೋಲ್ ನಲ್ಲಿದ್ದ ಎಎಸ್ಐ ಯೋಗೀಂದ್ರ ಪ್ರತಿಕ್ರಿಯಿಸಿ, ನಾವು ಕಡಬದಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್ ಸವಾರ ನಮ್ಮನ್ನು ಕಂಡೊಡನೆ ಹಿಂತಿರುಗಿ ಹೋಗಿದ್ದು, ಹಿಂಬದಿ ಸವಾರನನ್ನು ಕರೆದು ಕಾನೂನು ಪ್ರಕಾರವಾಗಿ ದಂಡ ವಿಧಿಸಿರುತ್ತೇವೆ. ಯಾವುದೇ ಅವ್ಯಾಚ ಶಬ್ದಗಳಿಂದ ನಿಂದಿಸಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News