ಕೊಚ್ಚಿಯ ಬಹುಮಹಡಿ ವಸತಿ ಸಮುಚ್ಛಯದ ಧ್ವಂಸಕಾರ್ಯಕ್ಕೆ ಸುಪ್ರೀಂ ಅನುಮತಿ
ಹೊಸದಿಲ್ಲಿ, ಸೆ.27: ಕೊಚ್ಚಿ ಸಮೀಪ ಅಕ್ರಮವಾಗಿ ನಿರ್ಮಿಸಿರುವ ಬಹುಮಹಡಿ ವಸತಿ ಸಮುಚ್ಛಯ ಮರಾಡು ಫ್ಲಾಟ್‌ಗಳನ್ನು ಕೆಡವಿ ಹಾಕಲು ಸುಪ್ರೀಂಕೋರ್ಟ್ ಶುಕ್ರವಾರ ಅನುಮತಿ ನೀಡಿದ್ದು, ನಾಲ್ಕು ವಾರದೊಳಗೆ ಫ್ಲಾಟ್ ಮಾಲಕರಿಗೆ ತಲಾ 25 ಲಕ್ಷ ರೂ. ಮಧ್ಯಂತರ ಪರಿಹಾರ ನೀಡುವಂತೆ ಕೇರಳ ಸರಕಾರಕ್ಕೆ ಆದೇಶಿಸಿದೆ. ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಲು ಕಾರಣರಾಗಿರುವವರಿಂದ ಹಣ ವಸೂಲಿ ಮಾಡುವಂತೆಯೂ ನ್ಯಾಯಾಲಯ ಸರಕಾರಕ್ಕೆ ತಿಳಿಸಿದೆ.
ನ್ಯಾಯಾಲಯಕ್ಕೆ ಅಫಿಡಾವಿಟ್ ಸಲ್ಲಿಸಿರುವ ಕೇರಳ ಸರಕಾರ, 138 ದಿನಗಳಲ್ಲಿ ಕಟ್ಟಡ ಧ್ವಂಸಕಾರ್ಯ ಪೂರ್ಣಗೊಳ್ಳಲಿದೆ. 90 ದಿನಗಳಲ್ಲಿ ಧ್ವಂಸ ಕಾರ್ಯ ಪೂರ್ಣಗೊಳಿಸಿ ಇನ್ನುಳಿದ ದಿನಗಳಲ್ಲಿ ಅವಶೇಷಗಳನ್ನು ತೆಗೆಯಲಾಗುವುದು ತಿಳಿಸಿದೆ.
ಕರಾವಳಿ ವಲಯ ಪ್ರದೇಶಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿರುವ ಬಿಲ್ಡರ್‌ಗಳು ಹಾಗೂ ಪ್ರೊಮೊಟರ್‌ಗಳ ಆಸ್ತಿಗಳನ್ನು ಹಿಡಿದಿಟ್ಟುಕೊಳ್ಳುವಂತೆಯೂ ಉಚ್ಚ ನ್ಯಾಯಾಲಯ ತಿಳಿಸಿದೆ. ಕಟ್ಟಡ ಧ್ವಂಸ ಕಾರ್ಯ ಹಾಗೂ ಒಟ್ಟು ಪರಿಹಾರ ಕಾರ್ಯವನ್ನು ಪರಿಶೀಲಿಸಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಏಕ ಸದಸ್ಯ ಸಮಿತಿಯನ್ನು ರಚಿಸುವಂತೆಯೂ ಸುಪ್ರೀಂಕೋರ್ಟ್ ಆದೇಶಿಸಿದೆ.
ಅಕ್ಟೋಬರ್ 25ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ.