ಭಾರತ ಫೈನಲ್‌ಗೆ ಪ್ರವೇಶ

Update: 2019-09-27 17:58 GMT

ಕಠ್ಮಂಡು, ಸೆ.27: ಮಾಲ್ಡೀವ್ಸ್ ತಂಡವನ್ನು 4-0 ಅಂತರದಿಂದ ಮಣಿಸಿದ ಭಾರತೀಯ ಫುಟ್ಬಾಲ್ ತಂಡ ಸ್ಯಾಫ್ ಅಂಡರ್-18 ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಿದೆ.

ಶುಕ್ರವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ನರೇಂದರ್ ಗಹ್ಲೋಟ್(7ನೇ ನಿಮಿಷ), ಮನ್ವೀರ್ ಸಿಂಗ್(79ನೇ ನಿಮಿಷ) ಹಾಗೂ ನಿಂಥೊಯ್‌ಗಾನ್ಬಾ ಮೀಟೈ(81ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರೆ, ಮಾಲ್ಡೀವ್ಸ್‌ನ ಅನಾಫ್ ರಶೀದ್ (45+1)ಸ್ವಯಂ ಗೋಲು ನೆರವಿನಿಂದ ಭಾರತ ಭರ್ಜರಿ ಜಯ ದಾಖಲಿಸಿತು. ಭಾರತ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಬಾಂಗ್ಲಾದೇಶದ ಸವಾಲು ಎದುರಿಸಲಿದೆ. ಭಾರತ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದು, 7ನೇ ನಿಮಿಷದಲ್ಲಿ ಮೇಲುಗೈ ಸಾಧಿಸಿತು.ಇಂಟರ್‌ಕಾಂಟಿನೆಂಟಲ್ ಕಪ್‌ನಲ್ಲಿ ಹಿರಿಯರ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನರೇಂದರ್ ಹೆಡರ್‌ನ ಮೂಲಕ ಎದುರಾಳಿ ಗೋಲ್‌ಕೀಪರ್‌ನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು.

 45 ನಿಮಿಷಗಳ ಆಟ ಮುಗಿದ ಬೆನ್ನಿಗೇ ಮಾಲ್ಡೀವ್ಸ್ ನ ರಶೀದ್ ಸ್ವಯಂ ಗೋಲು ಗಳಿಸಿ ಭಾರತದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಮೊದಲಾರ್ಧದ ಅಂತ್ಯಕ್ಕೆ ಮಾಲ್ಡೀವ್ಸ್ ಕೆಲವು ಅವಕಾಶವನ್ನು ಸೃಷ್ಟಿಸಿತು. ನಾಯಕ ಹಸನ್ ನಝೀಂ ಗೋಲು ಗಳಿಸಲು ವಿಫಲ ಯತ್ನ ನಡೆಸಿದರು.

ಭಾರತದ ಕೋಚ್ ಫ್ಲಾಯ್ಡಾ ಪಿಂಟೊ ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕೆ ಹುರಿದುಂಬಿಸಿದರು. ಬದಲಿ ಆಟಗಾರ ಮನ್ವೀರ್ 79ನೇ ನಿಮಿಷದಲ್ಲಿ 3-0 ಮುನ್ನಡೆ ಒದಗಿಸಿಕೊಟ್ಟರು. 81ನೇ ನಿಮಿಷದಲ್ಲಿ ಗೋಲು ಗಳಿಸಿದ ರೈಟ್-ವಿಂಗರ್ ನಿಂಥೊಯ್ ಭಾರತಕ್ಕೆ 4-0 ಗೆಲುವು ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News