ಅತ್ಯಾಧುನಿಕ ಖಂಡೇರಿ ಜಲಾಂತರ್ಗಾಮಿ ನೌಕಾಪಡೆಗೆ ನಿಯೋಜನೆ
ಹೊಸದಿಲ್ಲಿ, ಸೆ.28: ಶತ್ರುಗಳ ನಿರ್ದೇಶಿತ ಸ್ಥಾವರಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವುಳ್ಳ ಅತ್ಯಾಧುನಿಕ ಸ್ಕಾರ್ಪಿಯನ್ ಶ್ರೇಣಿಯ ಐಎನ್‌ಎಸ್ ಖಂಡೇರಿ ಜಲಾಂತರ್ಗಾಮಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಭಾರತೀಯ ಸೇನಾಪಡೆಗೆ ನಿಯೋಜಿಸಿದರು.
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಮ್‌ಬೀರ್ ಸಿಂಗ್, ನೌಕಾಸೇನೆಯ ಹಿರಿಯ ಅಧಿಕಾರಿಗಳು ಹಾಗೂ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ಪಿ-17 ಶಿವಾಲಿಕ್ ವರ್ಗದ ಲಘು ಯುದ್ಧನೌಕೆ ನೀಲಗಿರಿ ಹಾಗೂ ವಿಮಾನವಾಹಕ ಡ್ರೈಡಾಕ್(ಒಣ ಹಡಗುಕಟ್ಟೆ) ಅನ್ನೂ ನೌಕಾಪಡೆಗೆ ನಿಯೋಜಿಸಲಾಗಿದೆ.
ಪಿ-75 ಯೋಜನೆಯಡಿ ನೌಕಾಪಡೆಗೆ ನಿಯೋಜಿಸಲಾಗಿರುವ ಎರಡನೇ ದಾಳಿ ಸಬ್‌ಮೆರಿನ್ ಆಗಿರುವ ಖಂಡೇರಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು ನೀರಿನಡಿ ಚಲಿಸುವಾಗ ಅತ್ಯಂತ ಕಡಿಮೆ ಶಬ್ದ ಮಾಡುತ್ತದೆ. 67.5 ಮೀಟರ್ ಉದ್ದ, 12.3 ಮೀಟರ್ ಎತ್ತರವಿರುವ ಇದನ್ನು ಮುಂಬೈಯ ಮಜಗಾವ್ ಡಾಕ್ ಶಿಪ್‌ಬಿಲ್ಡರ್ಸ್ ನಿರ್ಮಿಸಿದೆ. 45000 ಕೋಟಿ ರೂ. ವೆಚ್ಚದ ಈ ಯೋಜನೆಯಲ್ಲಿ 7 ಸಬ್‌ಮೆರಿನ್ ನಿರ್ಮಿಸಲಾಗುವುದು. ಕ್ಷಿಪಣಿಗಳು ಹಾಗೂ ಟಾರ್ಪೆಡೋಸ್‌ಗಳನ್ನು ಹೊತ್ತೊಯ್ಯುವ ಖಂಡೇರಿ, ಶತ್ರುಗಳ ನಿರ್ದಿಷ್ಟ ಸ್ಥಾವರದ ಮೇಲೆ ನಿಖರ ದಾಳಿ ನಡೆಸುತ್ತದೆ.
ಶನಿವಾರ ನೌಕಾಪಡೆಗೆ ನಿಯೋಜಿಸಲ್ಪಟ್ಟ ಒಣ ಹಡಗುಕಟ್ಟೆ ನೌಕಾಪಡೆಯ ಅತ್ಯಂತ ದೊಡ್ಡ ಒಣ ಹಡಗುಕಟ್ಟೆಯಾಗಿದೆ. ಸಮುದ್ರದಲ್ಲಿ ಚಲಿಸುವ ವೇಳೆ ಹಾನಿಗೊಳಗಾಗುವ ನೌಕೆಗಳ ದುರಸ್ಥಿಗೆ ಈ ಹಡಗುಕಟ್ಟೆ ಬಳಸಲಾಗುತ್ತದೆ. ನೌಕೆಗಳಿಗೆ ಇಂಧನ ಮರುಪೂರೈಸುವ ವ್ಯವಸ್ಥೆಯೂ ಇದರಲ್ಲಿದೆ.