ಪಾನ್-ಆಧಾರ್ ಜೋಡಣೆಗೆ ಅಂತಿಮ ಗಡುವು ಮತ್ತೆ ವಿಸ್ತರಣೆ

Update: 2019-09-28 14:52 GMT

ಹೊಸದಿಲ್ಲಿ, ಸೆ. 28: ಪಾನ್-ಆಧಾರ್ ಜೋಡಣೆಯ ಅಂತಿಮ ಗಡುವನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಅಂತಿಮ ಗಡುವು ಸೆಪ್ಟಂಬರ್ 30 ಆಗಿತ್ತು ಎಂದು ಹಣಕಾಸು ಸಚಿವಾಲಯದ ಅಧಿಸೂಚನೆ ಶನಿವಾರ ತಿಳಿಸಿದೆ.

ನಿಗದಿತ ಅವಧಿಯೊಳಗೆ ಆಧಾರ್‌ನೊಂದಿಗೆ ಜೋಡಣೆಯಾಗದ ಪಾನ್ ಕಾರ್ಡ್ ಅಮಾನ್ಯವಾಗಲಿದೆ ಎಂದು ಈ ಹಿಂದೆ ತಿಳಿಸಲಾಗಿತ್ತು. ಆದರೆ ಇದೀಗ ಹೊಸ ನಿಯಮದ ಪ್ರಕಾರ, ಇವು ನಿಷ್ಕ್ರಿಯವಾಗಲಿದೆ. ನಿಷ್ಕ್ರಿಯ ಎಂಬ ಪದದ ಬಗ್ಗೆ ಸರಕಾರ ಇನ್ನೂ ವಿವರಣೆ ನೀಡಿಲ್ಲ. ಪಾನ್‌ಕಾರ್ಡ್ ಎಂಬುದು ಆದಾಯ ತೆರಿಗೆ ಇಲಾಖೆ ನೀಡುವ 10 ಡಿಜಿಟ್‌ನ ಅಕ್ಷರಸಂಖ್ಯಾಯುಕ್ತ ಕಾರ್ಡ್ ಆಗಿದ್ದರೆ ಆಧಾರ್ ಎಂಬುದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ನೀಡುವ 12 ಡಿಜಿಟ್‌ನ ವಿಶಿಷ್ಟ ಗುರುತುಪತ್ರವಾಗಿದೆ.

ಗ್ರಾಹಕರು ಆದಾಯ ತೆರಿಗೆ ವೆಬ್‌ಸೈಟ್ ಅಥವಾ ಎಸ್‌ಎಂಎಸ್ ಮೂಲಕ ಇವೆರಡನ್ನೂ ಸುಲಭವಾಗಿ ಪರಸ್ಪರ ಲಿಂಕ್ ಮಾಡಬಹುದಾಗಿದೆ. ಪಾನ್‌ಕಾರ್ಡ್‌ಗೆ ಆಧಾರ್ ಕಾರ್ಡ್ ಜೋಡಿಸದೇ ಇದ್ದರೆ ಪಾನ್ ಕಾರ್ಡ್ ಬಳಕೆದಾರರು ಹಣಕಾಸು ವ್ಯವಹಾರಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಹೀಗೆ ಜೋಡಿಸುವಾಗ ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗವನ್ನು ತಪ್ಪಿಲ್ಲದೆ ನಮೂದಿಸಬೇಕು.

ಒಟ್ಟು 8.47 ಕೋಟಿ ನೋಂದಾಯಿತ ಗ್ರಾಹಕರಲ್ಲಿ 6.77 ಕೋಟಿ ಗ್ರಾಹಕರು ಇದುವರೆಗೆ ಆಧಾರ್-ಪಾನ್‌ಕಾರ್ಡ್ ಲಿಂಕ್ ಮಾಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News