ರಹಸ್ಯ ಯುದ್ಧನೌಕೆ ಐಎನ್‌ಎಸ್ ನೀಲಗಿರಿ ಪರೀಕ್ಷಾರ್ಥ ತಿರುಗಾಟಕ್ಕೆ ಚಾಲನೆ
ಮುಂಬೈ,ಸೆ.28: ಪಿ-17ಎ ಯುದ್ಧನೌಕೆಗಳ ಸರಣಿಯ ಮೊದಲ ನೌಕೆ ಐಎಸ್‌ಎಸ್ ನೀಲಗಿರಿಯ ಪರಿಕ್ಷಾರ್ಥ ತಿರುಗಾಟಕ್ಕೆ ಮುಂಬೈಯ ಮಝಗಾಂವ್ ಶಿಪ್ ಬಿಲ್ಡರ್ಸ್ ಲಿ.ನ (ಎಂ.ಡಿ.ಎಲ್) ಬಂದರಿನಿಂದ ಶನಿವಾರ ಚಾಲನೆ ನೀಡಲಾಯಿತು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪತ್ನಿ ಸಾವಿತ್ರಿ ಸಿಂಗ್ ಸಮುದ್ರದಲ್ಲಿ ಹೆಚ್ಚಿನ ಪರೀಕ್ಷೆಗಾಗಿ ಐಎನ್‌ಎಸ್‌ಗೆ ಚಾಲನೆ ನೀಡಿದರು. ರಾಜನಾಥ್ ಸಿಂಗ್ ಜೊತೆಗೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಹಾಗೂ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಐಎನ್‌ಎಸ್ ನೀಲಗಿರಿ ಎಂ.ಡಿ.ಎಲ್‌ನ ಪ್ರೋಜೆಕ್ಟ್-17 ಅಲ್ಫಾದ ಮೊದಲ ನೌಕೆಯಾಗಿದೆ. ಮುಂದಿನ ದಿನಗಳಲ್ಲಿ ಇದೇ ಮಾದರಿಯ ಹೆಚ್ಚಿನ ನೌಕೆಗಳನ್ನು ಎಂಡಿಎಲ್ ತಯಾರಿಸಲಿದೆ. ಸದ್ಯ ಇರುವ ಶಿವಾಲಿಕ್ ಮಾದರಿಯ ಯುದ್ದನೌಕೆಗಳ ಬದಲಿಗೆ ಈ ರಹಸ್ಯ ಯುದ್ಧನೌಕೆಗಳನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಡಗುಗಳನ್ನು ಭಾರತೀಯ ನೌಕಾಪಡೆಯ ನೌಕಾಪಡೆ ವಿನ್ಯಾಸ ನಿರ್ದೇಶನಾಲಯ, ಹೊಸದಿಲ್ಲಿ ಇವರಿಂದ ದೇಶೀಯವಾಗಿ ವಿನ್ಯಾಸಗೊಳಿಸಲಾಗಿದೆ. ಪಿ17ಎ ಯುದ್ಧನೌಕೆಗಳಲ್ಲಿ ಸುಧಾರಿತ ರಕ್ಷಣೆ, ಸಮುದ್ರ ನಿಗಾ, ರಹಸ್ಯ ಮತ್ತು ಹಡಗು ಕೌಶಲ್ಯತೆಯ ನೂತನ ವಿನ್ಯಾಸವನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ಬಳಸಲಾಗಿರುವ ಸುಧಾರಿತ ರಹಸ್ಯ ತಂತ್ರಜ್ಞಾನಗಳಿಂದಾಗಿ ಈ ಹಡಗುಗಳನ್ನು ರಾಡರ್‌ಗಳ ಮೂಲಕ ಪತ್ತೆ ಮಾಡುವುದು ಬಹಳ ಕಷ್ಟ ಎಂದು ಅವರು ತಿಳಿಸಿದ್ದಾರೆ.