ಉತ್ತರ ಪ್ರದೇಶ ಸರಕಾರದಿಂದ ಚಿನ್ಮಯಾನಂದನ ರಕ್ಷಣೆ: ಪ್ರಿಯಾಂಕಾ ಗಾಂಧಿ ಆರೋಪ

Update: 2019-09-29 14:46 GMT

ಹೊಸದಿಲ್ಲಿ, ಸೆ. 29: ಚಿನ್ಮಯಾನಂದನ ಪ್ರಕರಣಕ್ಕೆ ಸಂಬಂಧಿಸಿ ಉತ್ತರಪ್ರದೇಶದ ಬಿಜೆಪಿ ಸರಕಾರವನ್ನು ರವಿವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಚಿನ್ಮಯಾನಂದನನ್ನು ರಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ಆಡಳಿತ ಅತ್ಯಾಚಾರದ ಪ್ರಕರಣ ದಾಖಲಿಸಿಲ್ಲ ಎಂದಿದ್ದಾರೆ.

 ಶಾಹಜಹಾನ್‌ಪುರದ ಕಾನೂನು ವಿದ್ಯಾರ್ಥಿನಿ ಚಿನ್ಮಯಾನಂದ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದರು. ಒಂದು ವರ್ಷಗಳ ಹಿಂದೆ ಆಡಳಿತ ಚಿನ್ಮಯಾನಂದನ ‘ಆರತಿ’ ಆಯೋಜಿಸಿತ್ತು ಎಂದು ಪ್ರತಿಪಾದಿಸುವ ಮಾಧ್ಯಮ ವರದಿಯೊಂದನ್ನು ಪ್ರಿಯಾಂಕಾ ಗಾಂಧಿ ವಾದ್ರಾ ತನ್ನ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ‘‘ವರ್ಷಗಳ ಹಿಂದೆ ಚಿನ್ಮಯಾನಂದನ ಆರತಿ ಕಾರ್ಯಕ್ರಮದಲ್ಲಿ ಶಾಹಜಹಾನ್‌ಪುರ ಆಡಳಿತದ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ವಿಷಯವನ್ನು ದಿನಪತ್ರಿಗೆಗಳು ಪ್ರಕಟಿಸಿವೆ’’ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

 ಅತ್ಯಾಚಾರ ಸಂತ್ರಸ್ತೆ ತನ್ನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ತಿಳಿಸಿದ ಹೊರತಾಗಿಯೂ ಚಿನ್ಮಯಾನಂದನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಲ್ಲ. ಪೂರ್ಣ ಆಡಳಿತ ಚಿನ್ಮಯಾನಂದನನ್ನು ಅಪ್ಪಿಕೊಂಡಿದೆ ಹಾಗೂ ರಕ್ಷಿಸುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

 ಕಾನೂನು ವಿದ್ಯಾರ್ಥಿನಿಯನ್ನು ಸುಲಿಗೆ ಆರೋಪದಲ್ಲಿ ಬುಧವಾರ ಬಂಧಿಸಿಲಾಗಿತ್ತು, ಅಲ್ಲದೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಗಂಟೆಗಳ ಬಳಿಕ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಚಿನ್ಮಯಾನಂದನನ್ನು ಬಂಧನದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News