ನಾವು ಸರಿಯಾದ ಆರ್ಥಿಕ ನೀತಿಗಳನ್ನು ಅನುಸರಿಸುತ್ತಿಲ್ಲ: ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ

Update: 2019-09-29 14:48 GMT

ಮುಂಬೈ, ಸೆ. 28: ದೇಶ ಸರಿಯಾದ ಆರ್ಥಿಕ ನೀತಿಗಳನ್ನು ಅನುಸರಿಸುತ್ತಿಲ್ಲ ಎಂದು ಬಿಜೆಪಿಯ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಶನಿವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ‘ಮೇಕ್ ಇನ್ ಇಂಡಿಯಾ’ದಂತಹ ಕೆಲವು ಉತ್ತಮ ಕಾರ್ಯಕ್ರಮಗಳನ್ನು ಆರಂಭಿಸಿದ್ದಾರೆ. ಆದರೆ, ವಿಶಾಲ ಆರ್ಥಿಕ ನೀತಿಗಳ ಕೊರತೆ ಇವೆ ಎಂದು ಅವರು ತಿಳಿಸಿದರು.

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಸೋವಿಯತ್ ಆರ್ಥಿಕ ಮಾದರಿಯನ್ನು ದೇಶದ ಮೇಲೆ ಹೇರುವ ಮೂಲಕ ಆರ್ಥಿಕತೆಯನ್ನು ಸ್ಥಗಿತಗೊಳಿಸಿದರು ಎಂದರು. ಇಂದು ನಾವು ಸರಿಯಾದ ಆರ್ಥಿಕ ನೀತಿಗಳನ್ನು ಅನುಸರಿಸುತ್ತಿದ್ದೇವೆಯೇ ? ಕ್ಷಮಿಸಿ, ಇಲ್ಲ ಎಂದೇ ಹೇಳಬೇಕು ಎಂದು ಅವರು ಹೇಳಿದರು.

 ಉಜ್ವಲ, ಮೇಕ್ ಇನ್ ಇಂಡಿಯಾ ಯೋಜನೆ ಹಾಗೂ ಬಯಲು ಶೌಚ ನಿಲ್ಲಿಸುವ ಅಭಿಯಾನಕ್ಕೆ ಮೋದಿ ಅವರು ಪರಿಶ್ರಮದಿಂದ ದುಡಿಯುತ್ತಿದ್ದಾರೆ ಎಂದು ಅವರು ತಿಳಿಸಿದರು. ‘‘ಆದರೆ, ಇವೆಲ್ಲವೂ ಸೂಕ್ಷ್ಮ ಆರ್ಥಿಕ ಕ್ರಮಗಳು. ದೇಶಕ್ಕೆ ವಿಶಾಲ ಆರ್ಥಿಕ ಕ್ರಮಗಳ ಅಗತ್ಯ ಇದೆ. ನಾವು ಅದನ್ನು ಇದುವರೆಗೆ ಮಾಡಿಲ್ಲ. ಇಂದು ನಾವು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಆದುದರಿಂದ ನಾವು ಅದನ್ನು ಮಾಡಬೇಕಿದೆ’’ ಎಂದು ಅವರು ಹೇಳಿದರು.

 ಹಣದುಬ್ಬರವನ್ನು ಹತೋಟಿಗೆ ತರಲು ಬಡ್ಡಿ ದರ ಹೆಚ್ಚಿಸಿದ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರನ್ನು ಸುಬ್ರಹ್ಮಣಿಯನ್ ಸ್ವಾಮಿ ಟೀಕಿಸಿದರು. ಈ ನಿರ್ಧಾರ ನಿರುದ್ಯೋಗ ಹಾಗೂ ಸಣ್ಣ, ಮಧ್ಯಮ ಕೈಗಾರಿಕೆಗೆ ಹಾನಿಯಾಗಲು ಕಾರಣವಾಯಿತು ಎಂದು ಅವರು ಹೇಳಿದರು. ಬ್ಯಾಂಕ್ ಸಾಲದ ಬಡ್ಡಿ ದರ ಶೇ. 9ಕ್ಕಿಂತ ಮೀರದು ಎಂಬ ಹಾಗೂ ಸ್ಥಿರ ಠೇವಣಿ, ಉಳಿತಾಯ ಖಾತೆಗೆ ಶೇ. 9 ಬಡ್ಡಿ ದರ ನೀಡುವ ಖಾತರಿಯನ್ನು ಸರಕಾರ ನೀಡಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News