ಹೆಣ್ಣುಮಕ್ಕಳ ಸಾಧನೆ ಗೌರವಿಸಲು ‘ಭಾರತ್ ಕಿ ಲಕ್ಷ್ಮೀ’ ಅಭಿಯಾನ: ಪ್ರಧಾನಿ ನರೇಂದ್ರ ಮೋದಿ

Update: 2019-09-29 15:03 GMT

ಹೊಸದಿಲ್ಲಿ, ಸೆ.29: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇಶದ ಹೆಣ್ಣುಮಕ್ಕಳನ್ನು ಗುರುತಿಸಲು ಭಾರತ್ ಕಿ ಲಕ್ಷ್ಮೀ ಅಭಿಯಾನ ಆರಂಭಿಸುವಂತೆ ಪ್ರಧಾನಿ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ಸಂಸ್ಕೃತಿಯಲ್ಲಿ ಪುತ್ರಿಯರನ್ನು ಲಕ್ಷ್ಮೀ ಎಂದು ಪರಿಗಣಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿರುವ ಹೆಣ್ಣುಮಕ್ಕಳನ್ನು ಗೌರವಿಸಲು ಭಾರತ್‌ ಕಿ ಲಕ್ಷ್ಮೀ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ಅವರ ಸಾಧನೆಯನ್ನು ಪ್ರಸಾರ ಮಾಡಬೇಕು ಎಂದರು. ಕೆಲವು ಹೆಣ್ಣು ಮಕ್ಕಳು ಬಡಮಕ್ಕಳಿಗೆ ಕಲಿಸುತ್ತಿದ್ದಾರೆ, ಕೆಲವರು ಆರೋಗ್ಯ ಮತ್ತು ನೈರ್ಮಲ್ಯೀಕರಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹಲವರು ವೈದ್ಯರಾಗಿ, ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡಾಕ್ಷೇತ್ರ, ಸಂಗೀತ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿರುವ ಹೆಣ್ಣುಮಕ್ಕಳನ್ನು ಗುರುತಿಸಿ ಗೌರವಿಸಲಾಗುವುದು” ಎಂದು ಮೋದಿ ಹೇಳಿದರು.

ಐಶ್ವರ್ಯ ಹಾಗೂ ಸಂತೋಷ ತರುವ ಲಕ್ಷ್ಮೀ ದೇವಿಯನ್ನು ದೀಪಾವಳಿಯ ಸಂದರ್ಭದಲ್ಲಿ ಪ್ರತೀ ಮನೆಯಲ್ಲೂ ಪೂಜಿಸಿ ಸ್ವಾಗತಿಸಲಾಗುತ್ತದೆ. ಇದೇ ರೀತಿ ಪ್ರತಿಯೊಬ್ಬರ ಮನೆಗೂ ಸಿಹಿತಿಂಡಿ, ಉಡುಗೊರೆ ಹಂಚುವ ಸಂಪ್ರದಾಯವಿದೆ. ತಮಗೆ ಅಗತ್ಯವಿದ್ದಷ್ಟನ್ನು ಬಳಸಿಕೊಂಡು ಉಳಿದದ್ದನ್ನು ಬಡವರಿಗೆ, ಅಗತ್ಯವಿರುವವರಿಗೆ ಹಂಚಬೇಕು ಎಂದು ಜನತೆಗೆ ಮನವಿ ಮಾಡಿದರು.

ಹಬ್ಬದ ಸಂದರ್ಭದಲ್ಲಿ ಮನೆಗಳಲ್ಲಿ ಸಂಭ್ರಮದ ವಾತಾವರಣ ಇರುವಂತೆಯೇ, ನಮ್ಮ ಮನೆಯ ಬಳಿ ವಾಸಿಸುವ ಕೆಲವು ಜನರು ಈ ಸಂಭ್ರಮದಿಂದ ವಂಚಿತರಾಗಿದ್ದಾರೆ ಎಂಬುದನ್ನು ಮರೆಯಬಾರದು. ದೀಪದ ಕೆಳಗೆ ಕತ್ತಲು ಎಂಬ ಪದ ಬಹುಷಃ ಈ ಪರಿಸ್ಥಿತಿಯನ್ನು ಸೂಚಿಸುತ್ತದೆ. ದೀಪದ ಬೆಳಕಿನಲ್ಲಿ ಸಂಭ್ರಮ ಆಚರಿಸುವಾಗ, ದೀಪದ ಆಸರೆಯೂ ಇಲ್ಲದೆ ಕತ್ತಲೆಯಲ್ಲಿ ಇರುವ ಜನರನ್ನು ಮರೆಯಬಾರದು. ಹಬ್ಬದ ಸಂದರ್ಭ ಕೆಲವು ಮನೆಗಳಲ್ಲಿ ಎಷ್ಟು ತಿಂದರೂ ಮುಗಿಯದಷ್ಟು ಸಿಹಿ ತಿಂಡಿ ರಾಶಿ ಬಿದ್ದಿದ್ದರೆ, ಇನ್ನು ಕೆಲವು ಮನೆಗಳ ಮಕ್ಕಳು ಒಂದು ಚೂರು ಸಿಹಿ ತಿಂಡಿಗಾಗಿ ಕಾತರದಿಂದ ಕಾಯುವ ಪರಿಸ್ಥಿತಿಯಿದೆ ಎಂದು ಮೋದಿ ಹೇಳಿದರು.

ಇ-ಸಿಗರೇಟ್ ನಿಷೇಧದ ವಿಷಯ ಪ್ರಸ್ತಾಪಿಸಿದ ಮೋದಿ, ಭಾರತವು ಸರ್ವನಾಶವಾಗದಂತೆ ತಡೆಯಲು ಸರಕಾರ ಈ ನಿರ್ಧಾರಕ್ಕೆ ಬಂದಿದೆ ಎಂದರು. ಇ-ಸಿಗರೇಟ್ ಮನುಷ್ಯನ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಯುವಜನತೆಗೆ ಈ ಅಪಾಯದ ಬಗ್ಗೆ ಅರಿವು ಇಲ್ಲ. ಆದರೆ ಇ-ಸಿಗರೇಟ್ ಕೂಡಾ ಇತರ ಸಿಗರೇಟ್‌ನಷ್ಟೇ ಹಾನಿಕಾರಕ. ಈ ಬಗ್ಗೆ ಪೋಷಕರು ತಿಳಿದುಕೊಳ್ಳಬೇಕು ಎಂದು ಮೋದಿ ಹೇಳಿದರು. ತಂಬಾಕು ಉತ್ಪನ್ನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಒಮ್ಮೆ ತಂಬಾಕು ಸೇವನೆಯ ಚಟಕ್ಕೆ ಅಂಟಿಕೊಂಡರೆ ಅದರಿಂದ ಹೊರಬರುವುದು ಸುಲಭವಲ್ಲ. ತಂಬಾಕು ಸೇವನೆ ಚಟ ಬಿಡಿಸಲು ಇ-ಸಿಗರೇಟ್ ಪರ್ಯಾಯ ಕ್ರಮ ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ. ಆದರೆ ಇದು ಸರಿಯಲ್ಲ, ಇ-ಸಿಗರೇಟ್ ಕೂಡಾ ಅಷ್ಟೇ ಹಾನಿಕಾರಕ. ಆದ್ದರಿಂದಲೇ ಸರಕಾರ ಇ-ಸಿಗರೇಟ್ ನಿಷೇಧಿಸುವ ನಿರ್ಧಾರಕ್ಕೆ ಬಂದಿದೆ ಎಂದು ಮೋದಿ ಹೇಳಿದರು. ಪರಿಸರ ಸಂರಕ್ಷಣೆಯ ಕ್ರಮವಾಗಿ, ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನವಾದ ಅಕ್ಟೋಬರ್ 2ರಿಂದ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ತ್ಯಜಿಸುವಂತೆ ಮೋದಿ ಜನತೆಗೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News