800 ಕೋಟಿ ರೂ. ಇನ್ನೂ ನೀಡದ ಸರಕಾರ: ಯೋಧರ ಪಡಿತರ ಭತ್ತೆಗೆ ಕತ್ತರಿ

Update: 2019-09-29 15:18 GMT

ಹೊಸದಿಲ್ಲಿ, ಸೆ. 29: ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತನ್ನ ಸಿಬ್ಬಂದಿಗೆ ಸೆಪ್ಟಂಬರ್ ತಿಂಗಳ ಪಡಿತರ ಭತ್ತೆ ಪಾವತಿಸಿಲ್ಲ ಎಂಬ ಟೆಲಿಗ್ರಾಫ್ ಪತ್ರಿಕೆ ವರದಿಯನ್ನು ಸಿಆರ್‌ಪಿಎಫ್ ರವಿವಾರ ಒಪ್ಪಿಕೊಂಡಿದೆ. ಆದರೆ, ಇದಕ್ಕೆ ಆರ್ಥಿಕ ಬಿಕ್ಕಟ್ಟು ಕಾರಣ ಎಂಬುದನ್ನು ನಿರಾಕರಿಸಿದೆ.

 ಜುಲೈ 22, ಆಗಸ್ಟ್ 8 ಹಾಗೂ ಸೆಪ್ಟಂಬರ್ 9ರಂದು ಜ್ಞಾಪನಾಪತ್ರಗಳನ್ನು ರವಾನಿಸಿದ ಹೊರತಾಗಿಯೂ ಈ ಉದ್ದೇಶಕ್ಕೆ ಗೃಹ ಸಚಿವಾಲಯ 800 ಕೋಟಿ ರೂಪಾಯಿ ಬಿಡುಗಡೆ ಮಾಡದೇ ಇರುವುದರಿಂದ ಸಿಬ್ಬಂದಿ ಪಡಿತರ ಭತ್ತೆ ಪಾವತಿಸಲು ಸಾಧ್ಯವಾಗಿಲ್ಲ ಎಂದು ಸಿಆರ್‌ಪಿಎಫ್ ತನ್ನ ಸೆಪ್ಟಂಬರ್ 13ರ ಆಂತರಿಕ ಪತ್ರದಲ್ಲಿ ಹೇಳಿತ್ತು. ‘‘ಪಡಿತರ ಭತ್ತೆ ರದ್ದುಗೊಳಿಸಿರುವುದು ಇದೇ ಮೊದಲು. ಕಳೆದ ವಾರ ನಾವು ಬಾಕಿ ಹಣದ ಕುರಿತು ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಅದಕ್ಕೆ ಅವರು ನಿಧಾನಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯನ್ನು ಉಲ್ಲೇಖಿಸಿದ್ದಾರೆ’’ ಎಂದು ಹೆಸರು ಹೇಳಲಿಚ್ಚಿಸದ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ದಿಲ್ಲಿಯಲ್ಲಿರುವ ಸಿಆರ್‌ಪಿಎಫ್‌ನ ಕೇಂದ್ರ ಕಚೇರಿಯಲ್ಲಿ ತಿಳಿಸಿದ್ದರು.

ಮಾವೋವಾದಿಗಳು ಹಾಗೂ ಉಗ್ರರ ವಿರುದ್ಧ ಹೋರಾಟ ನಡೆಸಲು ಸಮರ್ಥರಾಗಿರಲು ಇದು ಸಿಬ್ಬಂದಿಗೆ ನೆರವು ನೀಡುತ್ತದೆ. ಭತ್ಯೆ ಹಿಂದೆ ತೆಗೆಯುವ ನಿರ್ಧಾರ ಸಿಬ್ಬಂದಿಯನ್ನು ಹೋರಾಟಕ್ಕೆ ಸಮರ್ಥರನ್ನಾಗಿಸುವ ಮೂಲಕ ಪಡೆಯನ್ನು ಸಬಲೀಕರಿಸುವ ಪ್ರಧಾನಿ ಅವರ ಪ್ರತಿಪಾದನೆಗೆ ವಿರುದ್ಧವಾಗಿದೆ’’ ಎಂದು ಅವರು ಹೇಳಿದ್ದರು. ಈ ಕಳವಳವನ್ನು ಸಿಆರ್‌ಪಿಎಫ್‌ನ ಡಿಐಜಿ (ಬೇಹುಗಾರಿಕೆ) ಮೋಸೆಸ್ ದಿನಕರನ್ ತಳ್ಳಿ ಹಾಕಿದ್ದಾರೆ.

 ಪಡಿತರ ಭತ್ಯೆಯನ್ನು ಈ ವರ್ಷ ಸ್ವಲ್ಪ ಏರಿಕೆ ಮಾಡಲಾಗಿದೆ. ಬಾಕಿ ಪಾವತಿಸಿದ ಬಳಿಕ ಜುಲೈಯಲ್ಲಿ ನಿಧಿ ಖಾಲಿಯಾಗಿತ್ತು. ಗೃಹ ಸಚಿವಾಲಯದಿಂದ ನಾವು ಹೆಚ್ಚುವರಿ ನಿಧಿ ಪಡೆದ ಕೂಡಲೇ ಪಡಿತರ ಭತ್ತೆ ಮತ್ತೆ ಆರಂಭಿಸಲಿದ್ದೇವೆ ಎಂದು ಅವರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. 22,194 ಕೋಟಿ ರೂಪಾಯಿ ಪಡಿತರ ಭತ್ತೆ ಬಾಕಿಯನ್ನು 2 ಲಕ್ಷ ಸಿಬ್ಬಂದಿಗೆ ಪಾವತಿಸಲಾಗಿದೆ. ಪ್ರಸಕ್ತ ದರದಲ್ಲಿ ಇದು 6 ತಿಂಗಳ ಪಡಿತರ ಭತ್ತೆಗೆ ಸಮಾನ ಎಂದು ಅವರು ದಿನಕರನ್ ತಿಳಿಸಿದ್ದಾರೆ.

ಪಡಿತರ ಭತ್ಯೆ ನೀಡುತ್ತಿಲ್ಲ ಎಂಬ ಯೋಧರ ಪ್ರತಿಪಾದನೆ ಆಧಾರ ರಹಿತ ಹಾಗೂ ಅಸಂಬದ್ಧ. ಆದುದರಿಂದ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟು ಇಲ್ಲ. ಸೆಪ್ಟಂಬರ್‌ನ ಪಡಿತರ ಭತ್ತೆಯನ್ನು ಶೀಘ್ರದಲ್ಲಿ ಪಾವತಿಸಲಾಗುವುದು. ಸಿಆರ್‌ಪಿಎಫ್ ಎಂದಿಗೂ ಯೋಧರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ದಿನಕರನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News