ಡಾ. ಕಫೀಲ್ ಖಾನ್ ವಿಚಾರಣೆ ಇನ್ನೂ ಮುಗಿದಿಲ್ಲ: ಉ.ಪ್ರದೇಶ ಸರಕಾರ

Update: 2019-09-29 17:04 GMT

ಲಕ್ನೊ, ಸೆ.29: ಗೋರಖ್‌ಪುರ ಆಸ್ಪತ್ರೆಯಲ್ಲಿ ಮಕ್ಕಳು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಆಸ್ಪತ್ರೆಯ ಮಾಜಿ ವೈದ್ಯ ಡಾ. ಕಫೀಲ್ ಖಾನ್ ಅವರ ವಿಚಾರಣೆ ಇನ್ನೂ ನಡೆಯುತ್ತಿದೆ ಎಂದು ಉತ್ತರಪ್ರದೇಶ ಸರಕಾರ ತಿಳಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಫೀಲ್‌ ಖಾನ್‌ರನ್ನು ದೋಷಮುಕ್ತಗೊಳಿಸಿಲ್ಲ. ಅವರ ಮೇಲಿದ್ದ ಕರ್ತವ್ಯಲೋಪ ಹಾಗೂ ಆಮ್ಲಜನಕ ಸಿಲಿಂಡರ್ ಕೊರತೆಯನ್ನು ಆಸ್ಪತ್ರೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ವಿಫಲವಾಗಿರುವ ಆರೋಪವನ್ನು ಕೈಬಿಡಲಾಗಿದೆ ಅಷ್ಟೇ. ಉಳಿದಂತೆ ವಿಚಾರಣೆ ಮುಂದುವರಿದಿದೆ ಎಂದು ಶನಿವಾರ ಸರಕಾರ ಹೇಳಿಕೆ ನೀಡಿದೆ.

 ನಿಯಮಕ್ಕೆ ವಿರುದ್ಧವಾಗಿ, ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ವೃತ್ತಿ ನಿರ್ವಹಿಸುತ್ತಿರುವ, ಹಾಗೂ ಖಾಸಗಿಯಾಗಿ ನರ್ಸಿಂಗ್ ಹೋಂ ನಡೆಸುತ್ತಿರುವ ಕುರಿತು ಮಾಹಿತಿ ನೀಡದ ಆರೋಪವೂ ಖಾನ್ ಮೇಲಿದೆ. ತನ್ನ ಮೇಲಿನ ಆರೋಪವನ್ನು ಖಾನ್ ನಿರಾಕರಿಸಿದ್ದಾರೆ, ಆದರೆ ಇದಕ್ಕೆ ಸೂಕ್ತ ಉತ್ತರ ನೀಡಿಲ್ಲ. ಆರೋಪದ ಕುರಿತು ನಡೆಸಿದ ತನಿಖೆಯ ವಿವರವನ್ನು ಡಾ. ಖಾನ್‌ಗೆ ನೀಡಲಾಗಿದ್ದು ಉತ್ತರಿಸುವಂತೆ ತಿಳಿಸಲಾಗಿದೆ ಎಂದು ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರ ಮೃತ್ಯುಂಜಯ ಕುಮಾರ್ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಟಿ ನಡೆಸಿದ್ದ ಖಾನ್, ಅಲಹಾಬಾದ್ ನ್ಯಾಯಾಲಯ ತನಗೆ ಜಾಮೀನು ಮಂಜೂರುಗೊಳಿಸಿದ್ದು, ವೈದ್ಯಕೀಯ ಕರ್ತವ್ಯ ಲೋಪ ಎಸಗಿದ ಬಗ್ಗೆ ಯಾವುದೇ ಪುರಾವೆಯಿಲ್ಲ ಎಂದು ನಿರ್ದಿಷ್ಟವಾಗಿ ತಿಳಿಸಿದೆ.ಸರಕಾರದ ವೈಫಲ್ಯವನ್ನು ಮುಚ್ಚಿಹಾಕಲು ತನ್ನನ್ನು ಬಲಿಪಶು ಮಾಡಿ ಕಳೆದ 9 ತಿಂಗಳಿಂದ ಬಂಧನದಲ್ಲಿಡಲಾಗಿದೆ. ಉತ್ತರಪ್ರದೇಶ ಸರಕಾರ ಗೋರಖ್‌ ಪುರ ಘಟನೆಯಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರ ಕ್ಷಮೆ ಯಾಚಿಸಬೇಕು ಹಾಗೂ ಅವರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News