370ನೆ ವಿಧಿ ರದ್ದತಿ ನಂತರ ಕಾಶ್ಮೀರ ಭಯದಲ್ಲಿ ಮುಳುಗಿದೆ: ಗುಲಾಂ ನಬಿ ಆಝಾದ್

Update: 2019-09-30 17:09 GMT

ಹೊಸದಿಲ್ಲಿ, ಸೆ.30: ಕೇಂದ್ರ ಸರಕಾರದ ಆಗಸ್ಟ್ 5ರ ನಿರ್ಧಾರದ ನಂತರ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಚಿಂತೆಗೀಡು ಮಾಡುತ್ತಿದೆ ಮತ್ತು ಅಲ್ಲಿನ ಆರ್ಥಿಕತೆ ಸಂಕಷ್ಟಕ್ಕೊಳಗಾಗಿದೆ ಎಂದು ರಾಜ್ಯಸಭೆಯ ವಿರೋಧಪಕ್ಷದ ನಾಯಕ ಗುಲಾಂ ನಬಿ ಆಝಾದ್ ಸೋಮವಾರ ತಿಳಿಸಿದ್ದಾರೆ.

 ಕಣಿವೆ ರಾಜ್ಯದಲ್ಲಿ ಒಂದು ವಾರ ಸುತ್ತಾಡಿದ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆಝಾದ್, ಜಮ್ಮು ಕಾಶ್ಮೀರದಲ್ಲಿ ಭಯದ ವಾತಾವರಣವಿದೆ ಮತ್ತು ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ಬದಲಾಯಿಸಿದ ನಂತರ ಕೇಂದ್ರ ಸರಕಾರ ಸ್ಥಳೀಯ ಆಡಳಿತಕ್ಕೆ ಬೆದರಿಕೆಯೊಡ್ಡುತ್ತಿದೆ. ಕಳೆದ ಎರಡು ತಿಂಗಳಿಂದ ಅಲ್ಲಿ ಅಂಗಡಿಗಳನ್ನು ಮುಚ್ಚಲಾಗಿದ್ದು ಯಾವುದೇ ವ್ಯವಹಾರ ನಡೆಯುತ್ತಿಲ್ಲ. ಇದರಿಂದ ರಾಜ್ಯದ ಆರ್ಥಿಕತೆ ಹಳಿ ತಪ್ಪಿದೆ ಎಂದು ತಿಳಿಸಿದ್ದಾರೆ.

 ಕಾಶ್ಮೀರಕ್ಕೆ ತಲುಪುವ ಎಲ್ಲವೂ ಜಮ್ಮು ಮೂಲಕವೇ ಬರಬೇಕು. ಹಾಗಾಗಿ ಕಾಶ್ಮೀರದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಅಂಗಡಿ ಮಾಲಕರು ಸಂಪೂರ್ಣವಾಗಿ ಜಮ್ಮುವನ್ನೇ ಅವಲಂಬಿಸಿದ್ದಾರೆ. ಜಮ್ಮುವಿನಲ್ಲಿ ಸದ್ಯ ವ್ಯವಹಾರ ಶೂನ್ಯಕ್ಕೆ ತಲುಪಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿಲ್ಲ. ಆಡಳಿತ ಪಕ್ಷದ ಹಲವು ನಾಯಕರು ರಾಷ್ಟ್ರೀಯ ನಾಯಕರ ಭಯದಿಂದ ಈ ಬಗ್ಗೆ ಏನೂ ಮಾತನಾಡುತ್ತಿಲ್ಲ ಎಂದು ಆಝಾದ್ ಅಭಿಪ್ರಾಯಿಸಿದ್ದಾರೆ. ರಾಜ್ಯದಲ್ಲಿ ಬ್ಲಾಕ್ ಅಭಿವೃದ್ಧಿ ಪರಿಷತ್ ಚುನಾವಣೆಯ ಘೋಷಣೆಯ ಬಗ್ಗೆ ಮಾತನಾಡಿದ ಆಝಾದ್, ರಾಜ್ಯದ ಮುನ್ನೆಲೆಯ ರಾಜಕೀಯ ಪಕ್ಷಗಳ ನಾಯಕರನ್ನು ಬಂಧನದಲ್ಲಿ ಅಥವಾ ಗೃಹಬಂಧನಲ್ಲಿಟ್ಟಿರುವಾಗ ಬ್ಲಾಕ್ ಮತ್ತು ಜಿಲ್ಲಾ ಮಟ್ಟದ ಚುನಾವಣೆಗಳನ್ನು ನಡೆಸಲು ಮುಂದಾಗಿರುವುದು ಪ್ರಜಾಪ್ರಭುತ್ವದ ವ್ಯಂಗ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News