ಬ್ರಹ್ಮೋಸ್ ಕ್ಷಿಪಣಿಯ ಭೂದಾಳಿ ಸಾಮರ್ಥ್ಯದ ಮಾದರಿ ಪ್ರಯೋಗ ಯಶಸ್ವಿ

Update: 2019-09-30 17:50 GMT

 ಭುವನೇಶ್ವರ, ಸೆ.30: ಭಾರತದ ಅತ್ಯಂತ ಯಶಸ್ವಿ ಕ್ಷಿಪಣಿಯಾಗಿರುವ ಬ್ರಹ್ಮೋಸ್‌ನ ಭೂದಾಳಿ ಸಾಮರ್ಥ್ಯದ ಮಾದರಿಯ ಪ್ರಯೋಗ ಒಡಿಶಾದ ಬಾಲಸೋರ್ ಜಿಲ್ಲೆಯ ಚಾಂಡಿಪುರ ಕಡಲತಡಿಯಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಶ್ವದ ಅತೀ ವೇಗದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಎಂಬ ಹಿರಿಮೆ ಹೊಂದಿರುವ ಬ್ರಹ್ಮೋಸ್ ಚೀನಾ ಮತ್ತು ಪಾಕಿಸ್ತಾನದಿಂದ ಎದುರಾಗುವ ಸಂಭಾವ್ಯ ದಾಳಿಯ ಭೀತಿಗೆ ತಡೆಯಾಗಲಿದೆ ಎಂದು ರಕ್ಷಣಾ ಪಡೆಯ ಮೂಲಗಳು ತಿಳಿಸಿವೆ.

  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ರಶ್ಯದ ಎನ್‌ಪಿಒಎಮ್ ಸಹಯೋಗದಿಂದ ಅಭಿವೃದ್ಧಿಗೊಳಿಸಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ಸಮುದ್ರದಲ್ಲಿರುವ ನೌಕೆಯಿಂದ , ಆಕಾಶದಿಂದ ಅಥವಾ ಭೂಮಿಯ ಮೇಲಿಂದ ಹಾರಿಸಲು ಸಾಧ್ಯವಿದ್ದು ಇದು 290 ಕಿ.ಮೀ ದೂರದ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ.

 2017ರ ಮಾರ್ಚ್ 11ರಂದು ಬ್ರಹ್ಮೋಸ್ ಕ್ಷಿಪಣಿಯ ವಿಸ್ತರಿತ ಮಾದರಿಯನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿತ್ತು. ಈ ಕ್ಷಿಪಣಿ 450 ಕಿ.ಮೀ ದೂರದ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News