ಪರಿಸರದ ಕರೆ

Update: 2019-09-30 18:16 GMT

2019ರ ಸೆಪ್ಟಂಬರ್ 20ರಿಂದ 27ರ ತನಕ ನಡೆದ ಪರಿಸರ ಸಂರಕ್ಷಣಾ ಹೋರಾಟಗಳು ‘‘ನಾವು ಈ ಭೂಮಿಯನ್ನು ಹಿರಿಯರಿಂದ ಪಡೆದುಕೊಂಡಿರುವುದಲ್ಲ, ಬದಲಿಗೆ ನಮ್ಮ ಮಕ್ಕಳಿಂದ ಕಡ ತೆಗೆದುಕೊಂಡಿರುವುದು’’ ಎಂಬ ಹಳೆಯ ನಾಣ್ಣುಡಿಯನ್ನು ನೆನಪಿಸುವಂತಿತ್ತು. ಈ ನಾಣ್ಣುಡಿಯು ಈ ಕಾಲದ ಯುವಜನಾಂಗವು ಅತ್ಯಂತ ತುರ್ತಾಗಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿರುವ ಅಗತ್ಯವನ್ನು ಪ್ರತಿಪಾದಿಸುತ್ತದೆ ಮತ್ತು ಅದರ ಜೊತೆಜೊತೆಗೆ ಒಂದು ದೇಶದೊಳಗೆ ಮಾತ್ರವಲ್ಲದೆ ದೇಶದೇಶಗಳಾಚೆಯೂ ಎಲ್ಲಾ ಪೀಳಿಗೆಯವರೂ ಪರಿಸರ ಸಂರಕ್ಷಣೆಗಾಗಿ ಮುಂದಾಗಬೇಕಾದ ಬೃಹತ್ ಪರಿಕಲ್ಪನೆಯನ್ನೂ ಮುಂದಿರಿಸುತ್ತದೆ. ಆದರೆ ಆಯಾ ದೇಶಗಳ ಮಾಲಿನ್ಯಕೋರರು/ ಬಳಕೆದಾರರು ಒಟ್ಟಾರೆ ಹೊರಬೇಕಾದ ಐತಿಹಾಸಿಕ ಹೊಣೆಗಾರಿಕೆಗಳು ಈ ಎರಡೂ ಸಂದರ್ಭಗಳಲ್ಲಿ ಆಗಬೇಕಿದ್ದ ಸಹಕಾರಿ ಮತ್ತು ಸಾಮೂಹಿಕ ಕಾರ್ಯಾಚರಣೆಗಳ ಮೇಲೆ ಮಿತಿಯನ್ನು ಹೇರುತ್ತವೆ. ಸಾಮಾನ್ಯವಾಗಿ ಹೆಚ್ಚು ಮಾಲಿನ್ಯವನ್ನು ಉಂಟು ಮಾಡುತ್ತಿರುವವರು ಹೆಚ್ಚು ಮಾಲಿನ್ಯ ನಿವಾರಣೆಯ ಹೊರೆಯನ್ನು ಹೊರಬೇಕು ಎಂಬ ಸಾಮಾನ್ಯ ಜ್ಞಾನದ ತತ್ವಕ್ಕೆ ವ್ಯತಿರಿಕ್ತವಾಗಿ ಬರಲಿರುವ ದಿನಗಳಲ್ಲಿ ಕಡಿಮೆ ಮಾಲಿನ್ಯ ಉಂಟುಮಾಡುತ್ತಿರುವವರೇ ಹೆಚ್ಚು ಹೊಣೆಗಾರಿಕೆಯನ್ನು ಹೊರಬೇಕೆಂಬ ತತ್ವವು ಜಾರಿಯಾಗುತ್ತಿರುವುದು ಕಂಡುಬರುತ್ತಿದೆ.

ಈ ಹಿನ್ನೆಲೆಯಲ್ಲಿ ಭಾರತದ ನಗರಗಳಾದ್ಯಂತ ಪರಿಸರ ಸಂರಕ್ಷಣೆಗೆಂದು ಯುವಜನತೆ ಬೀದಿಗಿಳಿದಿರುವುದು ಅತ್ಯಂತ ಆಶಾದಾಯಕವಾದ ಬೆಳವಣಿಗೆಯಾಗಿದೆ. ಆದರೆ ಈ ಪ್ರತಿರೋಧಗಳ ಆಶಯಗಳು ಪರಿಸರ ನಿರ್ವಹಣೆಯ ಸ್ವರೂಪ ಮತ್ತು ಸಾರಗಳನ್ನು ಪ್ರಭಾವಿಸುವಷ್ಟು ಸಶಕ್ತವಾಗಿವೆಯೇ ಎಂಬ ಕಾಳಜಿಗಳೂ ಸಹ ಇದರ ಜೊತೆಜೊತೆಗೆ ವ್ಯಕ್ತವಾಗುತ್ತಿವೆ. ಕಳೆದ ಹತ್ತು ವರ್ಷಗಳಿಂದ ಪರಿಸರ ಬದಲಾವಣೆಯ ತಗಾದೆಗಳಲ್ಲಿ ಪರಿಸರ ಸಂರಕ್ಷಣಾವಾದಿಗಳು ಹೆಚ್ಚುಹೆಚ್ಚಾಗಿ ಮಾನವ ಹಕ್ಕು ಕಾನೂನುಗಳ ವ್ಯಾಖ್ಯಾನವನ್ನು ಬಳಸುತ್ತಿದ್ದಾರೆ. ಆದರೆ ಆ ಬಗೆಯ ವ್ಯಾಖ್ಯಾನಗಳು ವಿವಿಧ ನೆಲೆಗಳಿಂದ ನೋಡಿದಾಗ ಎಷ್ಟರ ಮಟ್ಟಿಗೆ ನಿಜವಾದ ಗೆಲುವನ್ನು ತಂದು ಕೊಟ್ಟೀತು ಎಂಬ ವಿಷಯವನ್ನು ಸಂರಕ್ಷಣಾ ವಕೀಲರು ಹಾಗೂ ಆಸಕ್ತರು ಇನ್ನಷ್ಟು ಕೂಲಂಕಷವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಉದಾಹರಣೆಗಾಗಿ ಸುರಕ್ಷಿತ ಪರಿಸರದ ‘ಸಹಲಾಭಗಳು’ ಎಂಬ ಸಂಗತಿಯನ್ನೇ ತೆಗೆದುಕೊಳ್ಳಿ. ಭಾರತದ ಸಂದರ್ಭದಲ್ಲಿ ಈ ಧೋರಣೆಯು ಹೆಚ್ಚು ಅನ್ವಯವಾಗುವುದಿಲ್ಲ. ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳ ಬದಲಿಗೆ ಸೌರ ಅಥವಾ ಗಾಳಿ ಆಧಾರಿತ ಪುನರ್‌ನವೀಕರಣ ಮಾಡಬಲ್ಲ ಶಕ್ತಿ ಮೂಲಗಳ ಬಳಕೆಯಿಂದ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‌ನ ಹೊರಸೂಸುವಿಕೆಯ ಪ್ರಮಾಣವು ಖಂಡಿತಾ ಕಡಿಮೆಯಾಗುತ್ತದೆ. ಆದರೆ ಅದೇ ಸಮಯದಲ್ಲಿ ಅದು ಉದ್ಯೋಗ ಸೃಷ್ಟಿಯೆಂಬ ‘ಸಹಲಾಭಗಳನ್ನು’ ಒದಗಿಸುತ್ತವೆಯೇ ಎಂಬುದು ಮಾತ್ರ ಪ್ರಶ್ನಾರ್ಹವೇ.

ಇಂಟಿಗ್ರೇಟೆಡ್ ರಿಸರ್ಚ್ ಆ್ಯಂಡ್ ಆ್ಯಕ್ಷನ್ ಫಾರ್ ಡೆವಲಪ್‌ಮೆಂಟ್ ಸಂಸ್ಥೆಯ ತಜ್ಞ ವಿದ್ವಾಂಸರು 2016ರಲ್ಲಿ ಒಂದು ವರದಿ ನೀಡಿದ್ದಾರೆ. ಅದರ ಪ್ರಕಾರ ಕೋಲ್ ಇಂಡಿಯಾ ಸಂಸ್ಥೆಯಲ್ಲಿ 2014-15ರ ಸಾಲಿನ ಉತ್ಪಾದನೆಯನ್ನು ಆಧರಿಸಿ ಹೇಳುವುದಾದರೆ, ಕಾರ್ಮಿಕರ ಉತ್ಪಾದಕತೆಯು ಪ್ರತಿ ಗಂಟೆಗೆ 0.75 ಟನ್ನಿನಷ್ಟಾಗುತ್ತದೆ. ಮಾತ್ರವಲ್ಲದೆ ಇದು ಒಂದು ಮೆಗಾವ್ಯಾಟ್ ಉತ್ಪಾದಕ ಸಾಮರ್ಥ್ಯದ ಫೋಟೋ ವೋಲ್ಟಾಯಿಕ್ ಸೌರ ಘಟಕದಲ್ಲಿನ 20 ಕಾರ್ಮಿಕರ ನಾಲ್ಕು ತಿಂಗಳ ಉತ್ಪಾದಕತೆಗಿಂತಲೂ ಹೆಚ್ಚಾಗಿದೆ. ಅಮೆರಿಕದ ಕಲ್ಲಿದ್ದಲು ಘಟಕಗಳಲ್ಲಿ 2011ರಲ್ಲಿ ಪ್ರತಿ ಕಾರ್ಮಿಕರ ಪ್ರತಿ ಗಂಟೆಯ ಉತ್ಪಾದಕತೆ 5.22 ಟನ್ನಿನಷ್ಟು ಎಂದು ಅಂದಾಜು ಮಾಡಲಾಗಿತ್ತು. ಹಾಗಿದ್ದಲ್ಲಿ ಉದ್ಯೋಗ ಸೃಷ್ಟಿಗಾಗಿ ಪರಿಸರ ಕಾಳಜಿಗಳನ್ನು ಬಿಟ್ಟುಕೊಡಬಹುದೇ? ಆದರೆ ಅಭಿವೃದ್ಧಿ ಸಾಮರ್ಥ್ಯ ದೃಷ್ಟಿಕೋನದ ವಿಶ್ಲೇಷಣೆಯಲ್ಲಿ ಉದ್ಯೋಗ ಮತ್ತು ಸ್ವಚ್ಚ ಪರಿಸರ/ ಸುರಕ್ಷಿತ ವಾತಾವರಣಗಳೆರಡೂ ಗುಣಮಟ್ಟದ ಜೀವನದ ಪ್ರೇರಕಶಕ್ತಿಗಳಾಗುತ್ತವೆ. ಆದ್ದರಿಂದ ಅವೆರಡೂ ಪರಸ್ಪರ ವಿರುದ್ಧವಾದ ಅಂಶಗಳೇನೂ ಆಗಬೇಕಿಲ್ಲ. ಆದರೆ ಮನುಕುಲವು ಸೀಮಿತವಾದ ಸಾಮರ್ಥ್ಯಗಳ ಸಂದರ್ಭವನ್ನು ಎದುರಿಸುತ್ತಿದೆ. ಆಗ ಒಳಗೊಳ್ಳುವುದಕ್ಕಿಂತ ಆದ್ಯತೆಯ ಪ್ರಶ್ನೆಗಳೂ ಹಾಗೂ ಭವಿಷ್ಯಕ್ಕಿಂತ ಸದ್ಯದ ಪ್ರಶ್ನೆಗಳೂ ಪ್ರಮುಖವಾಗಿಬಿಡುತ್ತವೆ.

ಅಂತಹ ಸಂದರ್ಭಗಳಲ್ಲಿ ಜೀವನೋಪಾಯಗಳು ಅದರೊಂದಿಗೆ ಬೆಸೆದುಕೊಂಡಿರುವ ಅಪಾಯಗಳಿಗಿಂತ ಹೆಚ್ಚಿನ ಮಹತ್ವವನ್ನು ಪಡೆದುಕೊಂಡುಬಿಡುತ್ತವೆ. ಇವತ್ತಿನ ಸಂದರ್ಭದಲ್ಲಿ ಜನರನ್ನು ಸುರಕ್ಷಿತ ಪರಿಸರದ ಹಕ್ಕನ್ನೂ ಒಳಗೊಂಡಂತೆ ತಮ್ಮ ಇತರ ಹಕ್ಕುಗಳನ್ನು ಪ್ರತಿಪಾದಿಸಿ ಗಳಿಸಿಕೊಳ್ಳಲು ಸಮರ್ಥರನ್ನಾಗಿಸುವ ಕಡೆಗೆ ಹೆಚ್ಚಿನ ಶ್ರಮವನ್ನು ಹಾಕಬೇಕಿದೆ. ಪರಿಸರ ಸಂರಕ್ಷಣೆಯು ಆಯಾ ದೇಶಗಳಿಗೆ ನಿರ್ದಿಷ್ಟವಾದ ವಿದ್ಯಮಾನವಾಗಿದೆ. ಹೀಗಾಗಿ ಆಯಾ ದೇಶದ ಸ್ಥಿತಿಗತಿಗಳು ಮತ್ತು ಅವು ಎದುರಿಸಬೇಕಾದ ಜಾಗತಿಕ ಸಂದರ್ಭವನ್ನು ಪರಿಗಣಿಸದೆ ಹೇರಲ್ಪಡುವ ಜಾಗತಿಕ ಸಂರಕ್ಷಣಾ ಮಾನದಂಡಗಳಿಗೆ ಯಾವ ಮೌಲ್ಯವೂ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದಾಗ ದೇಶಾದ್ಯಂತ ನಡೆದ ಪರಿಸರ ಸಂರಕ್ಷಣಾ ಹೋರಾಟವು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದೇ ಹೇಳಬಹುದು. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಪ್ರಭುತ್ವವು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲವೆಂದು ಟೀಕಿಸುವ ಅತ್ಯುತ್ಸಾಹದಲ್ಲಿ ಪ್ರತಿಭಟನಾಕಾರರು ಅತ್ಯಂತ ವಿವಾದಾಸ್ಪದ ವಿಷಯವಾಗಿದ್ದ ಪರಿಸರ ನಿರ್ವಹಣೆಯ ವಿಷಯವನ್ನು ಕಡೆಗಣಿಸಿಬಿಟ್ಟರೆಂದೇ ಹೇಳಬೇಕು. ವಿಶ್ವಸಂಸ್ಥೆಯ ಪರಿಸರ ಬದಲಾವಣೆಯ ಬಗೆಗಿನ ಜಾಗತಿಕ ಒಪ್ಪಂದದ ಚೌಕಟ್ಟು ರೂಪಿಸಿದ ತತ್ವಗಳಲ್ಲಿ ಪರಿಸರ ಬದಲಾವಣೆಗೆ ಸಂಬಂಧಪಟ್ಟಂತೆ ಆಯಾ ದೇಶಗಳ ಸಮಾನ ಆದರೆ ಭಿನ್ನಭಿನ್ನ ಹೊಣೆಗಾರಿಕೆಗಳು ಹಾಗೂ ನಿರ್ದಿಷ್ಟ ಸಾಮರ್ಥ್ಯಗಳ ತತ್ವವೂ ಒಂದು.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News