ಸತ್ಯ ಆಲಿಸುವ ಮನೋಭಾವ ಬೆಳೆಸಿಕೊಳ್ಳಿ: ಪ್ರಧಾನಿಗೆ ಸ್ವಾಮಿ ಕರೆ

Update: 2019-10-01 03:24 GMT

ಹೊಸದಿಲ್ಲಿ, ಅ.1: "ಪ್ರಧಾನಿ ನರೇಂದ್ರ ಮೋದಿಯವರೇ, ದೇಶದ ಆರ್ಥಿಕತೆಯನ್ನು ಸಂಕಷ್ಟದಿಂದ ಪಾರುಮಾಡಲು ನೀವು ಚಾಲನೆ ನೀಡಬಯಸಿದ್ದರೆ, ಅಹಿತಕರ ಸತ್ಯ ಒಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಿ ಮತ್ತು ಸರ್ಕಾರದ ಅರ್ಥಶಾಸ್ತ್ರಜ್ಞರನ್ನು ಬೆದರಿಸುವುದು ನಿಲ್ಲಿಸಿ"- ಇದು ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣ್ಯನ್‌ಸ್ವಾಮಿ ನೀಡಿದ ಸ್ಪಷ್ಟ ಸಲಹೆ.

"ಮೋದಿಯವರು ಸರ್ಕಾರ ನಡೆಸುವ ವಿಧಾನವೆಂದರೆ, ಕೆಲವು ಮಂದಿಯಷ್ಟೇ ನಿಗದಿತ ಗೆರೆ ದಾಟಿ ಹೊರಬರಲು ಸಾಧ್ಯ. ಆದರೆ ಇಂಥದ್ದನ್ನು ಮಾಡಬಾರದು ಎಂದು ಅವರಿಗೆ ತಿಳಿಹೇಳುವುದನ್ನು ಅವರು ಉತ್ತೇಜಿಸಬೇಕು. ಆದರೆ ಅವರು ಇನ್ನೂ ಆ ಮನೋಪ್ರವೃತ್ತಿ ಬೆಳೆಸಿಕೊಂಡಿಲ್ಲ" ಎಂದು ಸ್ವಾಮಿ ಹೇಳಿದ್ದಾರೆ.

ದೇಶದ ಜಿಡಿಪಿ ಪ್ರಗತಿ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಸಂದರ್ಭದಲ್ಲಿ ಪ್ರಗತಿಗೆ ಉತ್ತೇಜನ ನೀಡಲು ದೊಡ್ಡ ಪ್ರಮಾಣದ ತೆರಿಗೆ ವಿನಾಯ್ತಿ ನೀಡುವುದೂ ಸೇರಿದಂತೆ ಅಸಂಪ್ರದಾಯಿಕ ವಿಧಾನಗಳನ್ನು ಅನುಸರಿಸುತ್ತಿರುವ ಸಂದರ್ಭದಲ್ಲೇ ಆಡಳಿತ ಪಕ್ಷದ ಮೇಲ್ಮನೆ ಸದಸ್ಯರೊಬ್ಬರು ಪ್ರಧಾನಿಯವರನ್ನು ನೇರವಾಗಿ ಆಕ್ಷೇಪಿಸಿದ್ದಾರೆ.

ನೋಟು ರದ್ದತಿಯನ್ನು ಕೂಡಾ ಸ್ವಾಮಿ ಕಟುವಾಗಿ ಟೀಕಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಹಣಕಾಸು ಸಚಿವಾಲಯ, ವಾಸ್ತವ ಸಮಸ್ಯೆಗಳನ್ನು ನಿಜವಾಗಿ ಬಿಂಬಿಸದೇ, ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳದಿರುವುದು, ಗೊಂದಲಕಾರಿಯಾಗಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯನ್ನು ದಿಢೀರನೇ ಆರಂಭಿಸಿರುವುದು ಆರ್ಥಿಕತೆಯ ಇಂದಿನ ಸಂಕಷ್ಟಕ್ಕೆ ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.

ಉನ್ನತ ಪ್ರಗತಿಗೆ ಅಗತ್ಯವಾದ ನೀತಿಗಳ ಅರಿವು ಕೂಡಾ ಸರ್ಕಾರಕ್ಕೆ ಇಲ್ಲ ಎಂದು ಟೀಕಿಸಿದ್ದಾರೆ. "ಇಂದಿನ ಪರಿಸ್ಥಿತಿಯಲ್ಲಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ನೀತಿಗಳು ಬೇಕಾಗಿವೆ. ಆದರೆ ಇಂದು ಅದು ಕಾಣಿಸುತ್ತಿಲ್ಲ. ಸರ್ಕಾರ ನೇಮಿಸಿಕೊಂಡ ಅರ್ಥಶಾಸ್ತ್ರಜ್ಞರು ಪ್ರಧಾನಿಗೆ ಸತ್ಯ ಹೇಳಲು ಹೆದರುತ್ತಿದ್ದಾರೆ; ಸ್ವತಃ ಪ್ರಧಾನಿ ಕೂಡಾ ಕೇವಲ ಸೂಕ್ಷ್ಮ ಯೋಜನೆಗಳಿಗಷ್ಟೇ ಗಮನಹರಿಸುತ್ತಿದ್ದಾರೆ" ಎಂದು ಪುಸಕ್ತ ಬಿಡುಗಡೆ ಸಮಾರಂಭದಲ್ಲಿ ಮಾತನಾಡುವ ವೇಳೆ ಸ್ಪಷ್ಟಪಡಿಸಿದರು.

ಮೋದಿಯವರು ಕೇವಲ ಸೂಕ್ಷ್ಮ ಅಥವಾ ಏಕಮುಖಿ ಸಮಸ್ಯೆಗಳಾದ ಬಡಮಹಿಳೆಯರಿಗೆ ಅಡುಗೆ ಅನಿಲ ವಿತರಿಸುವ ಉಜ್ವಲಾ ಯೋಜನೆಯಂಥ ಕ್ರಮಗಳಿಗಷ್ಟೇ ಗಮನಹರಿಸಿದ್ದಾರೆ. ಆದರೆ ಆರ್ಥಿಕತೆಗೆ ಹಲವು ಆಯಾಮಗಳನ್ನು ಒಳಗೊಂಡ ಬಹುಮುಖಿ ದೃಷ್ಟಿಕೋನ ಅಗತ್ಯ ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News