ಸುಳ್ಯ: ಕಾರು - ಲಾರಿ ನಡುವೆ ಮುಖಾಮುಖಿ ಢಿಕ್ಕಿ; ತಂದೆ, ಮೂವರು ಪುತ್ರರು ಮೃತ್ಯು

Update: 2019-10-01 17:34 GMT

ಸುಳ್ಯ: ಕಾರು ಮತ್ತು ಲಾರಿ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದಾರುಣ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರ್ ಸಮೀಪ ಮಾವಿನಕಟ್ಟೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಕೊಡಗು ಜಿಲ್ಲೆಯ ನಾಪೊಕ್ಲು ಸಮೀಪದ ಕೊಟ್ಟಮುಡಿಯ ಹಸೈನಾರ್ ಹಾಜಿ (75), ಅವರ ಮಕ್ಕಳಾದ ಅಬ್ದುಲ್ ರಹಿಮಾನ್ (45),  ಇಬ್ರಾಹಿಂ(42), ಹ್ಯಾರಿಸ್(40) ಮೃತಪಟ್ಟ ದುರ್ದೈವಿಗಳು. ಇನ್ನೋರ್ವ ಪುತ್ರ ಉಮ್ಮರ್ ಫಾರೂಖ್(35)ಗಂಭೀರ ಗಾಯಗೊಂಡಿದ್ದಾರೆ.

ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಾರು ಮತ್ತು ಸುಳ್ಯ ಕಡೆಯಿಂದ ಮಂಗಳೂರು ಕಡೆಗೆ ಅಡುಗೆ ಎಣ್ಣೆ ಪಾರ್ಸೆಲ್ ಕೊಂಡೊಯ್ಯುತ್ತಿದ್ದ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಮೂರು ಮಂದಿ ಸ್ಥಳದಲ್ಲಿಯೇ ಮೃತಪಟ್ಟರೆ ಓರ್ವ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಉಮ್ಮರ್ ಫಾರೂಖ್ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ. ಅಫಫಾತದಲ್ಲಿ ಕಾರು ನಜ್ಜು ಗುಜ್ಜಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಸುಳ್ಯ ಪೊಲೀಸರು ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಕಾರಿನಲ್ಲಿ ಸಿಲುಕಿದವರನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದರು.

ಆಸ್ಪತ್ರೆಯಲ್ಲಿ ಸಂಬಂಧಿಯನ್ನು ಭೇಟಿಯಾಗಿ ಹಿಂತಿರುಗುತ್ತಿದ್ದರು

ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಯನ್ನು ಭೇಟಿಯಾಗಿ ಹಸೈನಾರ್ ಹಾಜಿ ಮತ್ತು ಕುಟುಂಬ ಹಿಂತಿರುಗುತ್ತಿದ್ದರು. ಮಂಗಳವಾರ ಬೆಳಗ್ಗಿನ ಜಾವ ಕೊಟ್ಟಮುಡಿಯಿಂದ ಹೊರಟು ಮಂಗಳೂರಿಗೆ ತೆರಳಿ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಸುಳ್ಯ ವೃತ್ತ ನಿರೀಕ್ಷಕ ಆರ್.ಸತೀಶ್‍ಕುಮಾರ್, ಎಸ್‍ಐ ಎಂ.ಆರ್.ಹರೀಶ್, ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿದರು. ಘಟನಾ ಸ್ಥಳದಲ್ಲಿ ಮತ್ತು ಆಸ್ಪತ್ರೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ನಾಪೊಕ್ಲು ಕೊಟ್ಟ ಮುಡಿಯಿಂದಲೂ ನೂರಾರು ಮಂದಿ ಸಂಬಂಧಿಕರು ಮತ್ತು ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿದ್ದರು.

ತಂದೆ ಮತ್ತು ಮಕ್ಕಳು ಜೊತೆಯಾಗಿಯೇ ತೆರಳುತ್ತಿದ್ದರು

ಹಸೈನಾರ್ ಹಾಜಿ ಕುಟುಂಬ ಕೊಟ್ಟುಮುಡಿಯಲ್ಲಿ ಕೃಷಿಕರಾಗಿದ್ದರು. ಜನಾನುರಾಗಿ ವ್ಯಕ್ತಿಯಾಗಿದ್ದ ಹಸೈನಾರ್ ಹಾಜಿ ಜಮಾಅತ್ ಕಮಿಟಿ ಸೇರಿದಂತೆ ವಿವಿಧ ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದರು. ತಂದೆ ಮತ್ತು ಮಕ್ಕಳು ಎಲ್ಲಾ ಕಡೆಗಳಿಗೆ ಜೊತೆಯಾಗಿಯೇ ತೆರಳುತ್ತಿದ್ದರು ಎಂದು ಅವರ ಸಂಬಂಧಿಕರು ನೆನಪಿಸುತ್ತಾರೆ. ಹಸೈನಾರ್ ಹಾಜಿಗೆ ಐವರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದರು. ಓರ್ವ ಪುತ್ರ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News