ಪಚ್ಚನಾಡಿ ಮಂದಾರ ತ್ಯಾಜ್ಯ ವಿಲೇವಾರಿ, ಶಾಶ್ವತ ಪರಿಹಾರ: ವಾರಾಂತ್ಯಕ್ಕೆ ಅಂತಿಮ ನಿರ್ಧಾರ ಸಾಧ್ಯತೆ

Update: 2019-10-01 13:54 GMT

ಮಂಗಳೂರು, ಅ.1: ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಿಂದ ತ್ಯಾಜ್ಯರಾಶಿಯು ಪ್ರವಾಹ ರೀತಿಯಲ್ಲಿ ಹರಿದು ಮಂದಾರ ವ್ಯಾಪ್ತಿಯಲ್ಲಿ ಹರಡಿರುವುದನ್ನು ವಿಲೇವಾರಿ ಮಾಡುವುದು ಹಾಗೂ ನಿರ್ವಸಿತರಿಗೆ ಶಾಶ್ವತ ಪರಿಹಾಕ್ಕೆ ಸಂಬಂಧಿಸಿ ಈ ವಾರಾಂತ್ಯದೊಳಗೆ ರಾಜ್ಯ ಸರಕಾರ ಅಂತಿಮ ನಿರ್ಧಾರಕ್ಕೆ ಅಂಕಿತ ನೀಡುವ ಸಾಧ್ಯತೆ ಇದೆ.

ಕೆಲ ದಿನಗಳ ಹಿಂದಷ್ಟೇ ಪಚ್ಚನಾಡಿಗೆ ಭೇಟಿ ನೀಡಿದ್ದ ಸರಕಾರದ ಉನ್ನತ ಮಟ್ಟದ ತಜ್ಞರ ತಂಡ ಇತರ ತಜ್ಞ ಅಧ್ಯಯನ ಸಮಿತಿಗಳ ವರದಿಯನ್ನೂ ತುಲನೆ ಮಾಡಿ ವರದಿಯನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಿದೆ. ಈಗಾಗಲೇ ಮಂದಾರದಲ್ಲಿ ಹರಡಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಹಾಗೂ ಪುನರ್ವಸತಿಗೆ ಸಂಬಂಧಿಸಿ, ಕೊಯಮುತ್ತೂರಿನ ಸುಧೀರ್ ಜೈಸ್ವಾಲ್ ನೇತೃತ್ವದ ಅಧ್ಯಯನ ತಂಡ ಸೇರಿದಂತೆ ಇತರ ತಜ್ಞ ಅಧ್ಯಯನ ಸಮಿತಿಗಳ ವರದಿಯನ್ನು ಕೂಡಾ ಪರಿಶೀಲಿಸಿ ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಈ ವರದಿಯ ಆಧಾರದಲ್ಲಿ ಯಾವ ರೀತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂಬ ಕುರಿತು ಜಿಲ್ಲಾಡಳಿತಕ್ಕೆ ಕೆಲ ದಿನಗಳಲ್ಲೇ ಸರಕಾರದಿಂದ ಸೂಚನೆ ಲಭಿಸಲಿದೆ. ಆ ಬಳಿಕ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರಕ್ರಿಯೆ ನಡೆಸಲಾಗುವುದು ಎಂದು ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.

ಕುಡುಪು ಸಮೀಪದ ಮಂದಾರದಲ್ಲಿ ಬಿದ್ದಿರುವ ಪಚ್ಚನಾಡಿಯ ತ್ಯಾಜ್ಯರಾಶಿಯನ್ನು ‘ಬೇಲಿಂಗ್ ಯುನಿಟ್’ ಸಹಾಯದಿಂದ ತಲಾ ಒಂದೊಂದು ಟನ್ ಗಾತ್ರದ ಬಾಕ್ಸ್ ಮಾದರಿಯಲ್ಲಿ ಸಂಗ್ರಹಿಸಿ ಅದನ್ನು ಕಂಪ್ರೆಸ್ ಯಂತ್ರದ ಮೂಲಕ ಪುಡಿ ಮಾಡಿ ಮತ್ತೆ ಡಂಪಿಂಗ್ ಯಾರ್ಡ್‌ಗೆ ಕೇಬಲ್ ಮಾದರಿಯಲ್ಲಿ ಎಳೆದು ತರುವ ವಿನೂತನ ಪ್ರಯೋಗದ ಬಗ್ಗೆ ಕೊಯಮುತ್ತೂರಿನ ಸುಧೀರ್ ಜೈಸ್ವಾಲ್ ನೇತೃತ್ವದ ಅಧ್ಯಯನ ತಂಡ ಯೋಜನಾ ವರದಿಯನ್ನು ಸಲ್ಲಿಸಿತ್ತು. ಇದರ ಜತೆಯಲ್ಲೇ ಈ ಹಿಂದಿನಂತೆಯೇ ಪಚ್ಚನಾಡಿ ತ್ಯಾಜ್ಯ ರಾಶಿಯಲ್ಲಿ ಅನುಸರಿಸಲಾಗುತ್ತಿದ್ದ ಲ್ಯಾಂಡ್ ಫಿಲ್ಲಿಂಗ್ (ಕಸದ ರಾಶಿಯನ್ನು ಮಣ್ಣು ಹಾಕಿ ಮುಚ್ಚುವುದು) ಮಾಡುವ ಬಗ್ಗೆ ಇನ್ನೊಂದು ತಂಡ ವರದಿ ನೀಡಿತ್ತು. ಆದರೆ ಇದರಿಂದ ಆ ಪ್ರದೇಶ ಮತ್ತಷ್ಟು ಬೆಟ್ಟದ ರೀತಿಯಾಗುವುದಲ್ಲದೆ, ಆ ಭೂಮಿ ಕೂಡಾ ಮರು ಬಳಕೆಗೆ ಅಸಾಧ್ಯವಾಗಲಿದೆ. ಹಾಗಾಗಿ ಈಗ ಹರಡಿರುವ ತ್ಯಾಜ್ಯವನ್ನು ತೆರವು ಮಾಡಿ ಆ ಜಾಗದಿಂದ ಈಗಾಗಲೇ ಬೇರೆಡೆಗೆ ಸ್ಥಳಾಂತರಗೊಳ್ಳಲು ಸಿದ್ಧವಿರುವ ಸುಮಾರು 19 ಕುಟುಂಬಗಳಿಂದ ಆ ಜಾಗವನ್ನು ಪಾಲಿಕೆ ಸ್ವಾಧೀನ ಪಡೆದುಕೊಂಡು ಅನ್ಯ ಕಾರ್ಯಕ್ಕೆ ಬಳಸುವುದು ಸೂಕ್ತವೆಂಬ ನಿರ್ಧಾರಕ್ಕೆ ಒತ್ತು ನೀಡುವ ಸಾಧ್ಯತೆ ಅಧಿಕ. ಆದರೆ ಈ ಕಾರ್ಯಕ್ಕೆ ಸಾಕಷ್ಟು ಹಣಕಾಸಿನ ಅಗತ್ಯವಿದೆ ಎನ್ನುತ್ತಾರೆ ಮನಪಾ ಪರಿಸರ ಅಭಿಯಂತರ ಮಧು.

ತ್ಯಾಜ್ಯ ವಿಲೇವಾರಿಗೆ ಬಯೋಮೈನಿಂಗ್ ಪ್ರಕ್ರಿಯೆ ಸೂಕ್ತ

‘‘ಸದ್ಯ ಈ ಕಸದ ರಾಶಿಯಡಿ ಮರಗಳು ಕೂಡಾ ಧರಾಶಾಹಿಯಾರುವುದರಿಂದ ಇಲ್ಲಿ ತ್ಯಾಜ್ಯ ತೆರವಿಗೆ ಕಸವನ್ನು ಸಂಗ್ರಹಿಸಿ, ಅದರಿಂದ ಕಲ್ಲು ಮಣ್ಣನ್ನು ಬೇರ್ಪಡಿಸಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರ್ಪಡಿಸುವ ಬಯೋ ಮೈನಿಂಗ್ ಪ್ರಕ್ರಿಯೆ ಸೂಕ್ತವೆನಿಸುತ್ತಿದೆ. ಮಂದಾರಕ್ಕೆ ಜರಿದಿರುವ ಕಸದ ತ್ಯಾಜ್ಯದ ಪ್ರಮಾಣವನ್ನು ಅಂದಾಜಿಸುವ ಕಾರ್ಯ ನಡೆಯುತ್ತಿದೆ. ಡ್ರೋನ್ ಸರ್ವೆ ನಡೆಸಲಾಗಿದೆ. ಅಲ್ಲಿ ಮರಗಳಿವೆ. ಅಲ್ಲಿ ಕಸವನ್ನು ವಿಲೇವಾರಿ ಮಾಡುವಾಗ ಈಗಾಗಲೇ ಕಸದ ರಾಶಿಯಡಿ ಹುದುಗಿರುವ ಮರಗಳು ಸಮಸ್ಯೆಯಾಗಲಿವೆ. ಹಾಗಾಗಿ ಇಲ್ಲಿ ಕೇವಲ ಜೆಸಿಬಿಯನ್ನು ಉಪಯೋಗಿಸುವುದು ಕಷ್ಟಸಾಧ್ಯ. ಕಟ್ಟರ್‌ಗಳ ಅಗತ್ಯವಿದೆ. 19 ಕುಟುಂಬಗಳು ಅಲ್ಲಿ ಮತ್ತೆ ನೆಲೆಸಲು ಹಿಂದೇಟು ಹಾಕಿವೆ. ಹಾಗಾಗಿ ಅವರಿಗೆ ಪರ್ಯಾಯ ಶಾಶ್ವತ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಬಯೋ ಮೈನಿಂಗ್ ಮಾಡೋದಾದರೆ ಮತ್ತೆ ಆ ಪ್ರದೇಶವನ್ನು ಬಫರ್ ರೆನ್ ಆಗಿ ಪರಿವರ್ತಿಸಿದರೆ, ಅಲ್ಲಿ ಮತ್ತೆ ತ್ಯಾಜ್ಯ ಹಾಕುವ ಪ್ರಮೇಯ ಬರುವುದಿಲ್ಲ. ಮಂದಾರದಲ್ಲಿ ಹರಿದಿರುವ ತ್ಯಾಜ್ಯವನ್ನು ಇದೀಗ ಬಯೋ ಮೈನಿಂಗ್ ಪ್ರಕ್ರಿಯೆ ಮೂಲಕ ತೆರವುಗೊಳಿಸುವಾಗ ಶೇ.70ರಷ್ಟು ಕಲ್ಲು ಮಣ್ಣೇ ಬರಲಿದೆ. ಅದನ್ನು ಸಂಗ್ರಹಿಸಲು ಜಾಗದ ಅಗತ್ಯವಿದೆ. ಮಾತ್ರವಲ್ಲದೆ ಈ ತೆರವುಗೊಳಿಸಿದ ತ್ಯಾಜ್ಯವನ್ನು ಉತ್ತರ ಕರ್ನಾಟಕದ ಸಿಮೆಂಟ್ ಕಾರ್ಖಾನೆಗೆ ಸಾಗಾಟ ವೆಚ್ಚವೂ ದುಬಾರಿಯಾಗಲಿದೆ. ಸರಕಾರದಿಂದ ಈ ಬಗ್ಗೆ ಅಂತಿಮ ನಿರ್ಧಾರ ಬರಬೇಕಾಗಿದೆ’’ ಎಂದು ಮಧು ಮಾಹಿತಿ ನೀಡಿದ್ದಾರೆ.

ಈ ನಡುವೆ, ಮಂದಾರದಿಂದ ಸ್ಥಳಾಂತರಗೊಂಡಿರುವ ಸಂತ್ರಸ್ತ ಕುಟುಂಬಗಳು ಆತಂಕದಿಂದಲೇ ದಿನ ಕಳೆಯುತ್ತಿವೆ. ಸರಕಾರದಿಂದ ಈ ಕುಟುಂಬಗಳಿಗೆ ಶಾಶ್ವತ ಪರಿಹಾರದ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಸದ್ಯ ಸಂತ್ರಸ್ತ ಕುಟುಂಬಗಳು ಕುಲಶೇಖರದ ಬೈತುರ್ಲಿಯ ಸರಕಾರಿ ಕಟ್ಟಡದಲ್ಲಿ ಪುನರ್ವಸತಿ ಪಡೆದಿದ್ದಾರೆ. ಶಾಶ್ವತ ವ್ಯವಸ್ಥೆಯಾಗುವವರಿಗೆ ಅವರಿಗೆ ಪುನರ್ವಸತಿ ಪ್ಯಾಕೇಜ್ ಮುಂದುವರಿಯಲಿದೆ ಎಂದು ಮನಪಾ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News