ಐಎಂಎಫ್ ನ ಭಾರತದ ಕಾರ್ಯಕಾರಿ ನಿರ್ದೇಶಕರಾಗಿ ಸುರ್ಜಿತ್ ಭಲ್ಲ ನೇಮಕ
ಹೊಸದಿಲ್ಲಿ,ಅ.1: ಅಂತರ್‌ಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಂಡಳಿಯ ಭಾರತದ ಕಾರ್ಯಕಾರಿ ನಿರ್ದೇಶಕರಾಗಿ ಖ್ಯಾತ ಅರ್ಥಶಾಸ್ತ್ರಜ್ಞ ಸುರ್ಜಿತ್ ಎಸ್ ಭಲ್ಲ ಅವರನ್ನು ನೇಮಕ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
71 ರ ಹರೆಯದ ಭಲ್ಲ ಅವರು ಜುಲೈ 30ರಂದು ಅಮೆರಿಕದಲ್ಲಿ ಅನಾರೋಗ್ಯದ ಕಾರಣ ನಿಧನರಾದ ಆರ್‌ಬಿಐ ಮಾಜಿ ಸಹಾಯಕ ಗವರ್ನರ್ ಸುಬೀರ್ ಗೋಕರ್ಣ ಅವರ ಸ್ಥಾನವನ್ನು ವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿ (ಎಸಿಸಿ) ಭಲ್ಲ ಅವರನ್ನು ಮೂರು ವರ್ಷಗಳ ಅವಧಿಗೆ ಐಎಂಎಫ್ ಮಂಡಳಿಗೆ ನೇಮಕ ಮಾಡಲು ಅನುಮತಿ ನೀಡಿದೆ. ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಬರಹಗಾರ ಆಗಿರುವ ಭಲ್ಲ ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಸಮಿತಿಯ ಅರೆಕಾಲಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಅವರು ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದುಕೊಂಡಿದ್ದಾರೆ. ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ವುಡ್ರೊಸ್ ವಿಲ್ಸನ್ ಸ್ಕೂಲ್‌ನಿಂದ ಸಾರ್ವಜನಿಕ ಮತ್ತು ಅಂತರ್‌ರಾಷ್ಟ್ರೀಯ ವ್ಯವಹಾರಗಳ ಸ್ನಾತಕೋತರ ಪದವಿ ಮತ್ತು ಪುರ್ದ್ವೆ ವಿಶ್ವವಿದ್ಯಾಲಯದಿಂದ ಬಿಎಸ್‌ಇಇ ಪದವಿ ಪಡೆದುಕೊಂಡಿದ್ದಾರೆ.