ವಿವಾದಾತ್ಮಕ ಲಾಬಿಗಾರ್ತಿ ನೀರಾ ರಾಡಿಯಾ ಆಸ್ಪತ್ರೆ ಉದ್ಘಾಟಿಸಿದ ಆದಿತ್ಯನಾಥ್: ಫೋಟೊ ವೈರಲ್
ಹೊಸದಿಲ್ಲಿ,ಅ.1: ವಿವಾದಾತ್ಮಕ ಮಾಜಿ ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾ ಅವರೊಂದಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದಿತ್ಯನಾಥ್ ಅವರು ರವಿವಾರ ವಾರಣಾಸಿಯ ಕಾಶಿ ವಿಶ್ವನಾಥ ಸಂಕೀರ್ಣದಲ್ಲಿ ಸಂಚಾರಿ ಆಸ್ಪತ್ರೆಯೊಂದನ್ನು ಉದ್ಘಾಟಿಸಿದ ಫೋಟೊ ಅದಾಗಿದೆ. ರಾಡಿಯಾ ಒಡೆತನದ ನಯತಿ ಹೆಲ್ತ್‌ಕೇರ್ ಈ ಆಸ್ಪತ್ರೆಯನ್ನು ನಿರ್ವಹಿಸಲಿದೆ.
ಫೋಟೊ ಸಹಿತ ಉದ್ಘಾಟನೆಯ ವಿವರಗಳನ್ನು ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾದ ಬಳಿಕ ಅದನ್ನು ಅಳಿಸಲಾಗಿತ್ತು. ಈ ಸಂಬಂಧ ಮುಖ್ಯಮಂತ್ರಿಗಳ ಕಚೇರಿಯು ಯಾವುದೇ ವಿವರಣೆಯನ್ನು ನೀಡಿಲ್ಲ.
ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಆದಿತ್ಯನಾಥ್ ಸಂಪುಟ ಸಹೋದ್ಯೋಗಿ ಅಶುತೋಷ ಟಂಡನ್ ಅವರೂ ಚಿತ್ರವನ್ನು ಟ್ವೀಟಿಸಿದ್ದು,ಅದು ಇನ್ನೂಇದೆ.
2ಜಿ ಹಗರಣದ ಕಾವು ಉತ್ತುಂಗದಲ್ಲಿದ್ದಾಗ ರಾಡಿಯಾರ ಸಂಭಾಷಣೆಗಳ ಟೇಪ್‌ಗಳು ಸೋರಿಕೆಯಾಗಿದ್ದವು.
ವಿವಾದದ ಲಾಭವೆತ್ತಲು ಮುಂದಾಗಿರುವ ಕಾಂಗ್ರೆಸ್ ರಾಡಿಯಾಗೆ ಆದಿತ್ಯನಾಥ್ ಸಾಮೀಪ್ಯವನ್ನು ಪ್ರಶ್ನಿಸಿದೆ.
ಆದಿತ್ಯನಾಥ ಮತ್ತು ನೀರಾ ರಾಡಿಯಾ ನಡುವಿನ ಸಂಬಂಧವೇನು ಎಂದು ಪ್ರಶ್ನಿಸಿದ ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಸುರೇಂದ್ರ ರಾಜಪೂತ್ ಅವರು,ಅತ್ಯಾಚಾರ ಆರೋಪಿ ಚಿನ್ಮಯಾನಂದ ಜೊತೆ ಆದಿತ್ಯನಾಥ್ ಫೋಟೊವನ್ನು ನಾವು ನೋಡಿದ್ದೇವೆ. ಈಗ ಹಗರಣ ಆರೋಪಿ ರಾಡಿಯಾ ಜೊತೆ ಅವರ ಪೋಟೊ ಕಾಣಿಸಿಕೊಂಡಿದೆ. ಎಲ್ಲ ಆರೋಪಿಗಳ ಬಗ್ಗೆ ಅವರು ಮೃದು ಧೋರಣೆ ಹೊಂದಿದ್ದಾರೆ ಎನ್ನುವುದನ್ನು ಇದು ತೋರಿಸುತ್ತಿದೆ ಎಂದು ಕುಟುಕಿದ್ದಾರೆ.
ಇಂತಹ ಫೋಟೊದ ಬಗ್ಗೆ ತನಗೆ ಯಾವುದೇ ಮಾಹಿತಿಯಿಲ್ಲ ಎಂದು ಬಿಜೆಪಿ ಹೇಳಿದೆ.
ಯಾವುದೇ ಫೋಟೊವನ್ನು ನೋಡಿ ತಪ್ಪು ಅಭಿಪ್ರಾಯಕ್ಕೆ ಬರಬೇಕಿಲ್ಲ. ನಾಯಕರು ಜನರನ್ನು ಭೇಟಿಯಾಗುವುದು ಮಾಮೂಲು. ರಾಡಿಯಾ ಪ್ರಕರಣದಲ್ಲಿ ದೋಷ ನಿರ್ಣಯವಾಗಿಲ್ಲ. ಹೀಗಾಗಿ ಫೋಟೊದಲ್ಲಿ ತಪ್ಪೇನಿದೆ ಎಂದು ಬಿಜೆಪಿ ವಕ್ತಾರ ಹೀರೊ ಬಾಜಪೈ ಪ್ರಶ್ನಿಸಿದ್ದಾರೆ.
2009ಲ್ಲಿ ಯುಪಿಎ ಅಧಿಕಾರಾವಧಿಯಲ್ಲಿ ರಾಡಿಯಾ ಸುದ್ದಿಯಾಗಿದ್ದರು. ಹಲವಾರು ಖ್ಯಾತ ಕೈಗಾರಿಕೋದ್ಯಮಿಗಳು,ಪತ್ರಕರ್ತರು ಮತ್ತು ರಾಜಕೀಯ ನಾಯಕರೊಡನೆ ಆಕೆ ನಡೆಸಿದ್ದ ದೂರವಾಣಿ ಸಂಭಾಷಣೆಗಳು ಸೋರಿಕೆಯಾಗಿ,ಸರಕಾರಗಳ ನೀತಿ ನಿರ್ಧಾರದ ಮೇಲೆ ಪ್ರಭಾವ ಬೀರುವ ಅಪವಿತ್ರ ಮೈತ್ರಿಯ ಸುಳಿವು ನೀಡಿತ್ತು.
काशी विश्वनाथ मंदिर में आने वाले श्रद्धालुओं के लिए आकस्मिक चिकित्सा व्यवस्था का उद्घाटन करते हुए मुख्यमंत्री माननीय श्री @myogiadityanath जी।
— Ashutosh Tandon (@GopalJi_Tandon) September 29, 2019
वाराणसी - 29 सितम्बर 2019 pic.twitter.com/rN1aMjbLf1