ಎಂಸಿಸಿ ಅಧ್ಯಕ್ಷರಾಗಿ ಕುಮಾರ ಸಂಗಕ್ಕರ ಅಧಿಕಾರ ಸ್ವೀಕಾರ
ಲಂಡನ್, ಅ.1: ಐತಿಹಾಸಿಕ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್‌ನ(ಎಂಸಿಸಿ)ಮೊದಲ ಬ್ರಿಟಿಷೇತರ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಮಂಗಳವಾರ ಅಧಿಕಾರ ವಹಿಸಿಕೊಂಡರು.
ಶ್ರೀಲಂಕಾದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಸಂಗಕ್ಕರ ಒಂದು ವರ್ಷಗಳ ಕಾಲ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಲಾರ್ಡ್ಸ್‌ನಲ್ಲಿ ಮೇನಲ್ಲಿ ನಡೆದ ಎಂಸಿಸಿ ವಾರ್ಷಿಕ ಮಹಾ ಸಭೆಯಲ್ಲಿ ನಿರ್ಗಮನ ಅಧ್ಯಕ್ಷ ಅಂಥೋನಿ ವ್ರೆಫೋರ್ಡ್ ಅವರು ಸಂಗಕ್ಕರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದರು.
‘‘ಪ್ರತಿಷ್ಠಿತ ಎಂಸಿಸಿ ಅಧ್ಯಕ್ಷ ಸ್ಥಾನವಹಿಸಿಕೊಳ್ಳಲು ನನಗೆ ರೋಮಾಂಚನವಾಗುತ್ತಿದೆ. ನಂಬಲಾಗದ ಕ್ರಿಕೆಟ್ ವರ್ಷವನ್ನು ನಿರ್ಮಿಸಲು ಎಂಸಿಸಿಯೊಂದಿಗೆ ಶ್ರಮಿಸಲು ನಾನು ಎದುರು ನೋಡುತ್ತಿದ್ದೇನೆ. ನಾವು ಪ್ರೀತಿಸುವ ಆಟಕ್ಕೆ ಹೆಚ್ಚಿನ ಬೆಂಬಲವನ್ನು ಪರಿವರ್ತಿಸಲು, ಕ್ರಿಕೆಟ್ ಹಾಗೂ ಆ ಸಮುದಾಯಕ್ಕೆ ಸ್ಥಳೀಯವಾಗಿ, ರಾಷ್ಟ್ರೀಯವಾಗಿ ಹಾಗೂ ಜಾಗತಿಕವಾಗಿ ಎಂಸಿಸಿ ಮಾಡುವ ಅದ್ಭುತ ಕಾರ್ಯಗಳ ಬಗ್ಗೆ ತಿಳಿಸಲು ನಮಗೆ ಅವಕಾಶ ಲಭಿಸಿದೆ’’ ಎಂದು ಸಂಗಕ್ಕರ ಹೇಳಿದ್ದಾರೆ.
‘‘ಎಂಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಗಕ್ಕರಗಿಂತ ಉತ್ತಮ ವ್ಯಕ್ತಿ ಬೇರೆ ಯಾರೂ ಇಲ್ಲ. ಸಮುದಾಯವನ್ನು ತೊಡಗಿಸಿಕೊಳ್ಳಲು ಕ್ರಿಕೆಟ್‌ನ ಶಕ್ತಿಯನ್ನು ಅವರು ಬಲವಾಗಿ ನಂಬುತ್ತಾರೆ. ಅವರು ಎಂಸಿಸಿ ಮಾಡುವ ಪ್ರಮುಖ ಕಾರ್ಯಗಳಿಗೆ ಪ್ರಧಾನ ರಾಯಭಾರಿಯಾಗಿದ್ದಾರೆ’’ ಎಂದು ನಿರ್ಗಮನ ಎಂಸಿಸಿ ಅಧ್ಯಕ್ಷ ವ್ರೆಫೋರ್ಡ್ ಹೇಳಿದ್ದಾರೆ.
41ರ ಹರೆಯದ ಸಂಗಕ್ಕರ ಎಂಸಿಸಿಯೊಂದಿಗೆ ಸುದೀರ್ಘ ಒಡನಾಟ ಹೊಂದಿದ್ದು, ಲಂಕಾದ ಪರ 134 ಟೆಸ್ಟ್ ಪಂದ್ಯಗಳಲ್ಲಿ 12,400 ರನ್ ಗಳಿಸಿದ್ದಾರೆ. 2002ರಲ್ಲಿ ಕ್ಲಬ್ ವಿರುದ್ಧ ಆಡಿದ್ದರು. ಚೆಸ್ಟರ್‌ಫೀಲ್ಡ್‌ನ ಕ್ವೀನ್ಸ್ ಪಾರ್ಕ್‌ನಲ್ಲಿ ನಡೆದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪ್ರವಾಸಿ ಶ್ರೀಲಂಕಾ ಪರ ಇನಿಂಗ್ಸ್ ಆರಂಭಿಸಿದ್ದರು. 2005ರಲ್ಲಿ ಸುನಾಮಿ ಪರಿಹಾರಕ್ಕಾಗಿ ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಎಂಸಿಸಿ ಪರ ಇಂಟರ್‌ನ್ಯಾಶನಲ್ ಇಲೆವೆನ್ ತಂಡದ ವಿರುದ್ಧ ಆಡಿದ್ದರು.
2011ರಲ್ಲಿ ಎಂಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಕಾಡ್ರೆಯಲ್ಲಿ ಸ್ಮರಣೀಯ ಹಾಗೂ ಪ್ರಭಾವಶಾಲಿ ಉಪನ್ಯಾಸ ನೀಡಿದ್ದರು. 2012ರಲ್ಲಿ ಕ್ಲಬ್‌ನ ಗೌರವ ಆಜೀವ ಸದಸ್ಯತ್ವ ಪಡೆದಿದ್ದರು. ಅದೇ ವರ್ಷ ಎಂಸಿಸಿ ವಿಶ್ವ ಕ್ರಿಕೆಟ್ ಸಮಿತಿಗೆ ಸೇರ್ಪಡೆಯಾಗಿದ್ದು, ಸಕ್ರಿಯ ಸದಸ್ಯನಾಗಿ ಉಳಿದಿದ್ದರು.