ಹೈದರಾಬಾದ್‌ಗೆ ಶರಣಾದ ಕರ್ನಾಟಕ

Update: 2019-10-01 18:03 GMT

                  ವಿಜಯ ಹಝಾರೆ ಟ್ರೋಫಿ

ಆಲೂರು, ಅ.1: ಅಂಬಟಿ ರಾಯುಡು ಅರ್ಧಶತಕ (ಔಟಾಗದೆ 87), ಎಡಗೈ ಸ್ಪಿನ್ನರ್ ಸಂದೀಪ್ ಸ್ಪಿನ್ ಮೋಡಿಯ(4-35) ನೆರವಿನಿಂದ ಹೈದರಾಬಾದ್ ತಂಡ ವಿಜಯ ಹಝಾರೆ ಟ್ರೋಫಿಯ ‘ಎ’ಗುಂಪಿನ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡವನ್ನು 21 ರನ್‌ಗಳ ಅಂತರದಿಂದ ಮಣಿಸಿತು. ಈ ಮೂಲಕ ನಾಲ್ಕು ಅಂಕವನ್ನು ತನ್ನದಾಗಿಸಿ ಕೊಂಡಿತು.

 ಮತ್ತೊಂದು ಎಲೈಟ್ ‘ಎ’ ಗುಂಪಿನ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಜವಾಬ್ದಾರಿಯುತ ಅರ್ಧಶತಕಗಳ ಕೊಡುಗೆ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ತಂಡ ಸೌರಾಷ್ಟ್ರ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿತು. ಈ ವರ್ಷದ ವಿಜಯ ಹಝಾರೆ ಟ್ರೋಫಿಯಲ್ಲಿ ಮೊದಲ ಜಯ ದಾಖಲಿಸಿತು.

 ಸೌರಾಷ್ಟ್ರವನ್ನು 9 ವಿಕೆಟ್‌ಗೆ 245 ರನ್‌ಗೆ ನಿಯಂತ್ರಿಸಿದ ಮುಂಬೈ ತಂಡ ಶ್ರೇಯಸ್(75) ಹಾಗೂ ಸೂರ್ಯ(ಔಟಾಗದೆ 85) ನೀಡಿದ ಅರ್ಧಶತಕಗಳ ಕೊಡುಗೆ ನೆರವಿನಿಂದ ಇನ್ನೂ 2 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಮುಂಬೈ ಪರ ಶಾರ್ದೂಲ್ ಠಾಕೂರ್ ಹಾಗೂ ಶಮ್ಸ್ ಮುಲಾನಿ ತಲಾ 3 ವಿಕೆಟ್ ಪಡೆದರು.

<ಕರ್ನಾಟಕಕ್ಕೆ ಸೋಲು:

ಕರ್ನಾಟಕ ತಂಡ ಹೈದರಾಬಾದ್ ವಿರುದ್ಧ ಆಡಿದ ಪಂದ್ಯದಲ್ಲಿ 21 ರನ್‌ನಿಂದ ಸೋಲುಂಡಿತು. ಹೈದರಾಬಾದ್ ತಂಡವನ್ನು 9 ವಿಕೆಟ್ ನಷ್ಟಕ್ಕೆ 198 ರನ್‌ಗೆ ನಿಯಂತ್ರಿಸಿದ ಕರ್ನಾಟಕ ಗೆಲ್ಲಲು 199 ರನ್ ಗುರಿ ಪಡೆದಿತ್ತು. ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್(60, 104 ಎಸೆತ, 6 ಬೌಂಡರಿ)ನೀಡಿದ ಏಕಾಂಗಿ ಹೋರಾಟದ ಹೊರತಾಗಿಯೂ ಕರ್ನಾಟಕ 45.2 ಓವರ್‌ಗಳಲ್ಲಿ 177 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಎಡಗೈ ಸ್ಪಿನ್ನರ್ ಸಂದೀಪ್(4-35)ಕರ್ನಾಟಕದ ದಾಂಡಿಗರನ್ನು ಕಾಡಿದರು.

 ಕರ್ನಾಟಕದ ಪರ ನಾಯಕ ಮನೀಷ್ ಪಾಂಡೆ(48, 54 ಎಸೆತ, 5 ಬೌಂಡರಿ, 2 ಸಿಕ್ಸರ್), ಮಿಥುನ್(20, 20 ಎಸೆತ) ಹಾಗೂ ಶರತ್(18, 28 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು. ಆರಂಭಿಕ ಆಟಗಾರ ಕೆ.ಎಲ್. ರಾಹುಲ್(4), ಕರುಣ್ ನಾಯರ್(0), ಎಸ್.ಗೋಪಾಲ್(1) ಹಾಗೂ ಕೆ. ಗೌತಮ್(5)ಭಾರೀ ನಿರಾಸೆಗೊಳಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ತಂಡ ಇತ್ತೀಚೆಗಷ್ಟೇ ನಿವೃತ್ತಿ ನಿರ್ಧಾರ ಹಿಂಪಡೆದ ರಾಯುಡು ಅರ್ಧಶತಕ(ಔಟಾಗದೆ 87, 111 ಎಸೆತ, 4 ಬೌಂಡರಿ, 3 ಸಿಕ್ಸರ್)ಸಹಾಯದಿಂದ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಅಭಿಮನ್ಯು ಮಿಥುನ್(2-34), ಪ್ರಸಿದ್ಧ ಕೃಷ್ಣ(2-35), ರೋಹಿತ್ ಮೋರೆ(2-31)ತಲಾ ಎರಡು ವಿಕೆಟ್ ಪಡೆದು ಸಂಘಟಿತ ಪ್ರದರ್ಶನ ನೀಡಿದರು. ಕರುಣ್ ನಾಯರ್(1-17), ಗೋಪಾಲ್(1-23) ಹಾಗೂ ದುಬೆ(1-18) ತಲಾ ಒಂದು ವಿಕೆಟ್ ಪಡೆದು ಹೈದರಾಬಾದ್ ತಂಡವನ್ನು 200ರೊಳಗೆ ಕಟ್ಟಿಹಾಕಿದರು. ಆದರೆ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಬೌಲರ್‌ಗಳ ಪ್ರಯತ್ನ ವ್ಯರ್ಥವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News