ಟೀಮ್ ಇಂಡಿಯಾಕ್ಕೆ ತವರಿನಲ್ಲಿ ಆಫ್ರಿಕಾ ಪರೀಕ್ಷೆ
ವಿಶಾಖಪಟ್ಟಣ, ಅ.1: ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ ವಿಶಾಖಪಟ್ಟಣದಲ್ಲಿ ಬುಧವಾರ ಆರಂಭಗೊಳ್ಳಲಿದೆ. ಕೊಹ್ಲಿ ಪಡೆ ಭರ್ಜರಿ ಗೆಲುವಿನ ಕಡೆಗೆ ಕಣ್ಣಿಟ್ಟಿದೆ. ಭಾರತ ತವರಿನಲ್ಲಿ ಸತತ 11ನೇ ಗೆಲುವಿನೊಂದಿಗೆ ಆಸ್ಟ್ರೇಲಿಯದ ದಾಖಲೆಯನ್ನು ಮುರಿಯಲು ಎದುರು ನೋಡುತ್ತಿದೆ. ಆಸ್ಟ್ರೇಲಿಯ ಮತ್ತು ಭಾರತ ತಲಾ 10 ಟೆಸ್ಟ್‌ಗಳಲ್ಲಿ ಗೆಲುವಿನ ದಾಖಲೆ ಹೊಂದಿವೆ. ಭಾರತಕ್ಕೆ ತವರಿನಲ್ಲಿ ದಾಖಲೆಯನ್ನು ಉತ್ತಮಪಡಿಸಲು ಇದೊಂದು ಉತ್ತಮ ಅವಕಾಶವಾಗಿದೆ.
ಏಕದಿನ ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿರುವ ರೋಹಿತ್ ಶರ್ಮಾ ಮೊದಲ ಟೆಸ್ಟ್ ನಲ್ಲಿ ಇನಿಂಗ್ಸ್ ಆರಂಭಿಸುವುದನ್ನು ನಿರೀಕ್ಷಿಸಲಾಗಿದೆ. 32ರ ಹರೆಯದ ರೋಹಿತ್ ಶರ್ಮಾ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸ್ಟಾರ್ ಆಟಗಾರರಾಗಿದ್ದಾರೆ. ಈ ವರ್ಷದ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ.
2013ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಬಳಿಕ 27 ಟೆಸ್ಟ್‌ಗಳನ್ನು ಆಡಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯದಲ್ಲಿ ಕೊನೆಯ ಟೆಸ್ಟ್ ಆಡಿದ್ದರು. ರೋಹಿತ್‌ಗೆ ಫಾರ್ಮ್ ಕಳೆದುಕೊಂಡಿರುವ ಲೋಕೇಶ್ ರಾಹುಲ್ ಬದಲಿಗೆ ಆರಂಭಿಕ ಬ್ಯಾಟ್ಸ್ ಮನ್ ಸ್ಥಾನದಲ್ಲಿ ಆಡುವ ಅವಕಾಶ ಒಲಿದು ಬಂದಿದೆ.
‘‘ರೋಹಿತ್‌ಗೆ ಅವಕಾಶ ಸಿಕ್ಕಿದರೆ ಕಠಿಣ ಶ್ರಮ ವಹಿಸಲಿದ್ದಾರೆ. ಅವರು ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲಿದ್ದಾರೆಂಬ ವಿಶ್ವಾಸ ನನಗಿದೆ’’ ಎಂದು ತಂಡದ ಉಪನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.
ರೋಹಿತ್ ಇತ್ತೀಚೆಗೆ ನಡೆದ ದ.ಆಫ್ರಿಕಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ತಾನೆದುರಿಸಿದ ಎರಡನೇ ಎಸೆತದಲ್ಲಿ ಖಾತೆ ತೆರೆಯದೆ ನಿರ್ಗಮಿಸಿದ್ದರು. ರೋಹಿತ್‌ಗೆ ಟೆಸ್ಟ್‌ನ ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನಕ್ಕೆ ಹೊಂದಿಕೊಳ್ಳಲು ಹೆಚ್ಚಿನ ಅವಕಾಶ ನೀಡಬೇಕಾದ ಆವಶ್ಯಕತೆ ಇದೆ ಎಂದು ಭಾರತದ ಬ್ಯಾಟಿಂಗ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಕಳೆದ ವರ್ಷ ವೆಸ್ಟ್‌ಇಂಡೀಸ್ ವಿರುದ್ಧ 2-0 ಅಂತರದಲ್ಲಿ ಜಯ ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 10ನೇ ಗೆಲುವು ದಾಖಲಿಸಿತ್ತು. 2013ರಿಂದ ಭಾರತ ತವರಿನಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿಲ್ಲ.
ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ ಗಾಯದ ಕಾರಣದಿಂದಾಗಿ ತಂಡದಿಂದ ದೂರವಾಗಿದ್ದಾರೆ. ಎಫ್ ಡು ಪ್ಲೆಸಿಸ್ ನೇತೃತ್ವದ ಅನನುಭವಿ ತಂಡದ ವಿರುದ್ಧ ಭಾರತ ಫೇವರಿಟ್ ತಂಡವಾಗಿದೆ. ಆಫ್ರಿಕಾ ತಂಡಕ್ಕೆ ಅನುಭವಿ ಆಟಗಾರರಾದ ಹಾಶಿಮ್ ಅಮ್ಲ ಮತ್ತು ಡೇಲ್ ಸ್ಟೇಯ್ನೆ ಅವರ ನಿವೃತ್ತಿಯ ನಂತರ ತಂಡದ ಮೊದಲ ಪ್ರವಾಸ ಸರಣಿಯಾಗಿದೆ. ಅಮ್ಲ (9,282) ಗರಿಷ್ಠ ರನ್ ಸಂಪಾದಿಸಿರುವ ಆಫ್ರಿಕಾದ ಬ್ಯಾಟ್ಸ್ ಮನ್. ಸ್ಟೇಯ್ನ್ 439 ವಿಕೆಟ್ ಪಡೆದಿರುವ ಆಫ್ರಿಕಾದ ಶ್ರೇಷ್ಠ ಬೌಲರ್.
ಆಫ್ರಿಕಾ ತಂಡದ ವೇಗದ ಬೌಲರ್ ಆ್ಯಂರಿಚ್ ನೋರ್ಟ್ಜೆ,ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರೂಡಿ ಸೆಕೆಂಡ್ , ಎಡಗೈ ಸ್ಪಿನ್ನರ್ ಸೆನುರಾನ್ ಮುತ್ತುಸ್ವಾಮಿ ಇದ್ದಾರೆ. ಇವರೆಲ್ಲರೂ ಇನ್ನೂ ಟೆಸ್ಟ್ ಕ್ಯಾಪ್ ಧರಿಸಿದವರು. ವೆರ್ನಾನ್ ಫಿಲ್ಯಾಂಡರ್ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಕೆಟ್ ಪಡೆದಿದ್ದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಮೊದಲ ಟೆಸ್ಟ್ ನಲ್ಲಿ ಫಿಲ್ಯಾಂಡರ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಕಳೆದ ವರ್ಷ ನಡೆದ ಸರಣಿಯಲ್ಲಿ ಕಾಗಿಸೊ ರಬಾಡ ನೇತೃತ್ವದ ವೇಗದ ಬೌಲಿಂಗ್ ವಿಭಾಗದ ದಾಳಿಗೆ ಟೀಮ್ ಇಂಡಿಯಾ ತತ್ತರಿಸಿ 1-2 ಅಂತರದಲ್ಲಿ ಸೋಲು ಅನುಭವಿಸಿತ್ತು. 2015ರಲ್ಲಿ ಭಾರತಕ್ಕೆ ಆಗಮಿಸಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಅಂತರದಲ್ಲಿ ಜಯ ಗಳಿಸಿತ್ತು.
ಭಾರತ: ವಿರಾಟ್ ಕೊಹ್ಲಿ(ನಾಯಕ), ಮಾಯಾಂಕ್ ಅಗರ್‌ವಾಲ್, ರೋಹಿತ್ ಶರ್ಮಾ, ಚೆತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್, ವೃದ್ಧಿಮಾನ್ ಸಹಾ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಕುಲ್‌ದೀಪ್ ಯಾದವ್, ಮುಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಶುಭಮನ್ ಗಿಲ್.
ದಕ್ಷಿಣ ಆಫ್ರಿಕಾ: ಎಫ್‌ಡು ಪ್ಲೆಸಿಸ್(ನಾಯಕ), ಟೆಂಬಾ ಬವುಮಾ, ಥೆವುನಿಸ್ ಡಿ ಬ್ರುಯೆನ್, ಕ್ವಿಂಟನ್ ಡಿ ಕಾಕ್, ಡಿಯಾನ್ ಎಲ್ಗರ್, ಝುಬೈರ್ ಹಂಝಾ, ಕೇಶವ ಮಹಾರಾಜ್, ಏಡೆನ್ ಮರ್ಕರಮ್, ಸೆನುರಾನ್ ಮುತ್ತುಸ್ವಾಮಿ, ಲುಂಗಿ ಗಿಡಿ, ಆ್ಯಂರಿಚ್ ನೋರ್ಟ್ಜೆ, ವೆರ್ನಾನ್ ಫಿಲ್ಯಾಂಡರ್, ಡಾನೆ ಪಿಡೆ, ಕಾಗಿಸೊ ರಬಾಡ, ರೂಡಿ ಸೆಕೆಂಡ್.
ಹೈಲೈಟ್ಸ್
- ಭಾರತ ತವರಿನಲ್ಲಿ 11ನೇ ಸರಣಿ ಗೆಲುವಿಗೆ ಎದುರು ನೋಡುತ್ತಿದೆ.
- 2015ರಲ್ಲಿ ಪತನಗೊಂಡ ಆಫ್ರಿಕಾ ತಂಡದ 70 ವಿಕೆಟ್‌ಗಳಲ್ಲಿ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ 54 ವಿಕೆಟ್‌ಗಳನ್ನು ಹಂಚಿಕೊಂಡಿದ್ದರು.
- ಎಫ್ ಡು ಪ್ಲೆಸಿಸ್ ಏಶ್ಯಾದಲ್ಲಿ ಆಡಿರುವ 12 ಟೆಸ್ಟ್ ಗಳಲ್ಲಿ ಬ್ಯಾಟಿಂಗ್ ಸರಾಸರಿ 22.38. ಅದರಲ್ಲೂ ಮುಖ್ಯವಾಗಿ ಸ್ಪಿನ್ನರ್‌ಗಳ ವಿರುದ್ಧ ಕಳಪೆ ಪ್ರದರ್ಶನದ ದಾಖಲೆ (21.19)ಹೊಂದಿದ್ದಾರೆ. 19 ಬಾರಿ ಔಟಾಗಿದ್ದಾರೆ. ಈ ಪೈಕಿ 16 ಬಾರಿ ಸ್ಪಿನ್ನರ್‌ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ.
ಮೊದಲ ಪಂದ್ಯಕ್ಕೆ ಮಳೆಯ ಭೀತಿ
- ಕಳೆದ ಒಂದು ವಾರದಿಂದ ವಿಶಾಖಪಟ್ಟಣದಲ್ಲಿ ಆಗಾಗ ಮಳೆ ಕಾಣಿಸಿಕೊಳ್ಳುತ್ತಿದೆ. ಈ ಕಾರಣದಿಂದಾಗಿ ಟೆಸ್ಟ್ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ದ.ಆಫ್ರಿಕಾ ಮತ್ತು ಮಂಡಳಿ ಅಧ್ಯಕ್ಷರ ಇಲೆವೆನ್ ತಂಡಗಳ ನಡುವಿನ ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಇದರಿಂದಾಗಿ ಮೂರು ದಿನಗಳ ಪಂದ್ಯದಲ್ಲಿ ಎರಡು ದಿನಗಳ ಕಾಲ ಮಾತ್ರ ಆಡಲು ಸಾಧ್ಯವಾಗಿತ್ತು.
► ಹೆಡ್ ಟು ಹೆಡ್
- ಆಡಿರುವ ಒಟ್ಟು ಟೆಸ್ಟ್‌ಗಳು 36, ಗೆಲುವು: ಭಾರತ 22, ಆಫ್ರಿಕಾ 15, ಡ್ರಾ 10.
- ಭಾರತದಲ್ಲಿ ಆಡಿರುವ ಪಂದ್ಯಗಳು 16, ಗೆಲುವು: ಭಾರತ 8, ಆಫ್ರಿಕಾ 3, ಡ್ರಾ 5.