‘ಗಾಂಧಿ-150 ಚಿಂತನಾ ಯಾತ್ರೆ’ಗೆ ಚಾಲನೆ

Update: 2019-10-02 05:47 GMT

ಮಂಗಳೂರು, ಅ.2: ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ಮಂಗಳೂರಿನ ಹಲವು ಪ್ರಗತಿಪರ, ಸ್ವಾತಂತ್ರ ಸಂಗ್ರಾಮದಲ್ಲಿ ಭಾಗಿಯಾದ ಪರಂಪರೆಯುಳ್ಳ, ದೇಶಪ್ರೇಮಿ ಸಂಘಟನೆಗಳು ಹಮ್ಮಿಕೊಂಡಿರುವ ‘ಗಾಂಧಿ-150 ಚಿಂತನಾ ಯಾತ್ರೆ’ ಕಾರ್ಯಕ್ರಮಕ್ಕೆ ಬುಧವಾರ ಬೆಳಗ್ಗೆ ಚಾಲನೆ ನೀಡಲಾಯಿತು.

ಮಂಗಳೂರಿನ ಕಂಕನಾಡಿಯಲ್ಲಿರುವ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿರುವ ಮಹಾತ್ಮಾ ಗಾಂಧೀಜಿಯ ಗುಡಿಯಲ್ಲಿ ವಿಶೇಷ ಅರ್ಚನೆಯ ಮೂಲಕ ಚಿಂತನಾ ಯಾತ್ರೆ ಆರಂಭಗೊಂಡಿತು.

 ಇದೇ ಸಂದರ್ಭ ಚಿಂತನಾ ಯಾತ್ರೆಯ ಲಾಂಛನವನ್ನು ಹಿರಿಯ ವಿದ್ವಾಂಸ ಪ್ರೊ.ಬಿ.ಎಂ.ಇಚ್ಲಂಗೋಡ್ ಬಿಡುಗಡೆಗೊಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ನಿಕಟಪೂರ್ವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್, ಜಗದೀಶ್ ಕೊಪ್ಪ, ಸಂಘಟಕರಾದ ನಗರದ ಖ್ಯಾತ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಗುಲಾಬಿ ಬಿಳಿಮಲೆ, ರಾಜರಾಮ್ ತೋಳ್ಪಾಡಿ, ಮೋಹನ್ ಚಂದ್ರ, ನಾಗೇಶ್ ಕಲ್ಲೂರು ಮತ್ತಿತರರು ಉಪಸ್ಥಿತರಿದ್ದರು.

ಅ.2ರ ಗಾಂಧಿ ಜಯಂತಿಯಿಂದ ಜನವರಿ 30ರ ಗಾಂಧಿ ಹುತಾತ್ಮರಾದ ದಿನದವರೆಗೆ ಈ ಚಿಂತನಾ ಯಾತ್ರೆ ಜಿಲ್ಲಾದ್ಯಂತ ನಡೆಯಲಿದೆ. ಶಾಲೆ, ಕಾಲೇಜು ಮತ್ತಿತರ ಕಡೆಗಳಲ್ಲಿ ಗಾಂಧೀಜಿಯ ಚಿಂತನೆಗಳ ಬಗ್ಗೆ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರ ರಚನಾ ಸ್ಪರ್ಧೆ, ನಾಟಕಗಳು, ಉಪನ್ಯಾಸಗಳು, ಗೀತ ಗಾಯನ ಇತ್ಯಾದಿಗಳನ್ನು ಏರ್ಪಡಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News