ಜಮ್ಮು-ಕಾಶ್ಮೀರ: ಅ.3ರಿಂದ ಶಾಲೆಗಳು ಮತ್ತು ಅ.9ರಿಂದ ಕಾಲೇಜುಗಳ ಪುನರಾರಂಭ
ಶ್ರೀನಗರ,ಅ.2: ಕಾಶ್ಮೀರ ಕಣಿವೆಯಲ್ಲಿನ ಎಲ್ಲ ಶಾಲೆಗಳನ್ನು ಅ.3ರಿಂದ ಮತ್ತು ಕಾಲೇಜುಗಳನ್ನು ಅ.9ರಿಂದ ಪುನರಾರಂಭಿಸುವಂತೆ ಜಮ್ಮು-ಕಾಶ್ಮೀರ ಆಡಳಿತವು ಆದೇಶಿಸಿದೆ. ಕಾಶ್ಮೀರ ವಿಭಾಗಾಧಿಕಾರಿ ಬಷೀರ್ ಅಹ್ಮದ್ ಖಾನ್ ಅವರು ಸೋಮವಾರ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ದೇಶ ನೀಡಿರುವುದಾಗಿ ಆಡಳಿತದ ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಹಾಗೂ ಶಾಲಾಕಾಲೇಜುಗಳ ಪ್ರಾಂಶುಪಾಲರು ಸಭೆಯಲ್ಲಿ ಭಾಗವಹಿಸಿದ್ದರು. ಕಣಿವೆಯಲ್ಲಿನ ಮೆಡಿಕಲ್ ಮತ್ತು ಡೆಂಟಲ್ ಕಾಲೇಜುಗಳು ಈಗಾಗಲೇ ಸುಗಮವಾಗಿ ಕಾರ್ಯ ನಿರ್ವಹಿಸುತ್ತಿವೆ ಮತ್ತು ಯಾವುದೇ ಅಡ್ಡಿಯಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ ಎಂದು ತಿಳಿಸಿರುವ ಖಾನ್,ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದ ಅವಧಿಗೆ ವಿದ್ಯಾರ್ಥಿಗಳಿಂದ ಶಿಕ್ಷಣ ಶುಲ್ಕ ಅಥವಾ ಬಸ್ ಶುಲ್ಕ ವಸೂಲು ಮಾಡದಂತೆ ನೋಡಿಕೊಳ್ಳುವಂತೆ ಕಣಿವೆಯಲ್ಲಿನ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನು ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳಿಗೆ ಭಾರೀ ದಂಡವನ್ನು ವಿಧಿಸಲಾಗುವುದು ಮತ್ತು ಅವುಗಳ ನೋಂದಣಿಯನ್ನು ರದ್ದುಗೊಳಿಸುವುದಾಗಿ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.
ಆ.5ರಂದು ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡು,ಹಲವಾರು ನಿರ್ಬಂಧಗಳನ್ನು ಹೇರಿದಾಗಿನಿಂದ ರಾಜ್ಯವು ಭಾಗಶಃ ಬಂದ್ ಸ್ಥಿತಿಯಲ್ಲಿದೆ. ಕಾಶ್ಮೀರದಲ್ಲಿ ಹಾಲಿ ಯಾವುದೇ ನಿರ್ಬಂಧಗಳಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸೆ.29ರಂದು ತಿಳಿಸಿದ್ದರು.
ಕಳೆದ ಎರಡು ತಿಂಗಳಲ್ಲಿ ಶಾಲೆಗಳನ್ನು ಪುನರಾರಂಭಿಸಲು ರಾಜ್ಯ ಆಡಳಿತವು ಪ್ರಯತ್ನಿಸಿತ್ತಾದರೂ ವಿದ್ಯಾರ್ಥಿಗಳು ಬಾರದ್ದರಿಂದ ಅದು ವಿಫಲಗೊಂಡಿತ್ತು.