ಗಾಂಧಿ ಬಗ್ಗೆ ಮೋದಿಗೆ ಗೌರವವಿದ್ದಿದ್ದರೆ ಟ್ರಂಪ್ ತನ್ನನ್ನು ‘ರಾಷ್ಟ್ರಪಿತ’ ಎಂದಾಗ ಏಕೆ ಆಕ್ಷೇಪಿಸಲಿಲ್ಲ?

Update: 2019-10-02 15:01 GMT

  ಜೈಪುರ,ಅ.2: ರಾಷ್ಟ್ರಪಿತ ಎಂದೇ ಪ್ರಸಿದ್ಧರಾಗಿರುವ ಮಹಾತ್ಮಾ ಗಾಂಧಿಯವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವವಿದ್ದಿದ್ದರೆ ತನ್ನ ಇತ್ತೀಚಿನ ಅಮೆರಿಕ ಭೇಟಿ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತನ್ನನ್ನು ‘ರಾಷ್ಟ್ರಪಿತ ’ಎಂದು ಬಣ್ಣಿಸಿದಾಗ ಏಕೆ ಸುಮ್ಮನಿದ್ದರು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಬುಧವಾರ ಇಲ್ಲಿ ಪ್ರಶ್ನಿಸಿದರು.

ಗಾಂಧಿ ಜಯಂತಿಯ ಅಂಗವಾಗಿ ಇಲ್ಲಿನ ಗಾಂಧಿ ಸರ್ಕಲ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಮೋದಿ ಅವರು ಮಹಾತ್ಮಾ ಗಾಂಧಿಯವರನ್ನು ನಿಜಕ್ಕೂ ಗೌರವಿಸುತ್ತಿದ್ದರೆ ಟ್ರಂಪ್ ಅವರ ತಪ್ಪನ್ನು ತಿದ್ದಬೇಕಿತ್ತು ಮತ್ತು ಭಾರತವು ಒಬ್ಬರೇ ರಾಷ್ಟ್ರಪಿತನನ್ನು ಹೊಂದಿದೆ,ಅವರ ಹೆಸರು ಮೋಹನದಾಸ ಕರಮಚಂದ ಗಾಂಧಿ ಮತ್ತು ಬೇರೆ ಯಾರೂ ಅವರ ಸ್ಥಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಿ ಹೇಳಬೇಕಾಗಿತ್ತು ಎಂದರು.

ಕಳೆದ 70 ವರ್ಷಗಳಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಎಂದಿಗೂ ಗಾಂಧಿಯವರಿಗೆ ಮನ್ನಣೆ ನೀಡಿರಲಿಲ್ಲ. ಆದರೆ ಈಗ ಪ್ರಧಾನಿ ಮೋದಿ,ಆರೆಸ್ಸೆಸ್ ಮತ್ತು ಬಿಜೆಪಿ ಅವರ ಹೆಸರನ್ನು ಜಪಿಸಲು ಪ್ರಾರಂಭಿಸಿದ್ದಾರೆ. ಗಾಂಧಿಯವರಿಗೆ ಮನ್ನಣೆ ನೀಡಿರದಿದ್ದಕ್ಕಾಗಿ ಅವರು ಮೊದಲು ಕ್ಷಮೆ ಯಾಚಿಸಬೇಕು ಎಂದೂ ಗೆಹ್ಲೋಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News