×
Ad

ನಾಳೆಯಿಂದ 250 ಜಿಲ್ಲೆಗಳಲ್ಲಿ ಬ್ಯಾಂಕ್‌ಗಳಿಂದ ಸಾಲಮೇಳ

Update: 2019-10-02 20:21 IST

ಹೊಸದಿಲ್ಲಿ,ಅ.2: ಹಬ್ಬದ ಋತುವಿನ ಬೇಡಿಕೆಯನ್ನು ಪೂರೈಸಲು ಬಳಕೆದಾರರು ಮತ್ತು ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ)ಗಳಿಗೆ ಸಾಲವನ್ನೊದಗಿಸುವ ಕಾರ್ಯಕ್ರಮದ ಅಂಗವಾಗಿ ಬ್ಯಾಂಕುಗಳು ಗುರುವಾರ ದೇಶಾದ್ಯಂತ 250 ಜಿಲ್ಲೆಗಳಲ್ಲಿ ‘ಸಾಲ ಮೇಳ ’ದ ಮೊದಲ ಹಂತಕ್ಕೆ ಚಾಲನೆ ನೀಡಲಿವೆ.

ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಸಾಲಮೇಳದಲ್ಲಿ ಚಿಲ್ಲರೆ ವ್ಯಾಪಾರ, ಕೃಷಿ, ವಾಹನ, ಮನೆ, ಎಂಎಸ್‌ಎಂಇ, ಶಿಕ್ಷಣ ಮತ್ತು ವೈಯಕ್ತಿಕ ಸಾಲ ವಿಭಾಗಗಳಲ್ಲಿ ಸ್ಥಳದಲ್ಲಿಯೇ ಸಾಲಗಳನ್ನು ಮಂಜೂರು ಮಾಡಲಾಗುವುದು.

ಎಸ್‌ಬಿಐ,ಪಿಎನ್‌ಬಿ,ಬಿಒಬಿ ಮತ್ತು ಕಾರ್ಪ್‌ಬ್ಯಾಂಕ್ ಸೇರಿದಂತೆ ಎಲ್ಲ ಬ್ಯಾಂಕುಗಳು ಹಬ್ಬದ ಋತುವಿನ ಸಾಲ ಬೇಡಿಕೆಯ ಲಾಭವೆತ್ತಲು ಸಜ್ಜಾಗಿವೆ.

ಈ ತಿಂಗಳ ಆರಂಭದಲ್ಲಿ ನಡೆದಿದ್ದ ವಾರ್ಷಿಕ ಸಾಧನೆ ಪುನರ್‌ಪರಿಶೀಲನಾ ಸಭೆಯಲ್ಲಿ ಗುರುತಿಸಲಾದ 400 ಜಿಲ್ಲೆಗಳಲ್ಲಿ ಸಾಲಮೇಳಗಳನ್ನು ನಡೆಸಲು ಸರಕಾರಿ ಸ್ವಾಮ್ಯದ ಬ್ಯಾಂಕುಗಳು ನಿರ್ಧರಿಸಿದ್ದವು. ಬಳಿಕ ಖಾಸಗಿ ಬ್ಯಾಂಕುಗಳೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದವು.

ಇದು ಬ್ಯಾಂಕುಗಳನ್ನು ಗ್ರಾಹಕರ ಮನೆಬಾಗಿಲಿಗೆ ಒಯ್ಯುವ ಪರಿಕಲ್ಪನೆಯನ್ನೊಳಗೊಂಡ ವ್ಯವಸ್ಥಿತ ಬ್ಯಾಂಕ್ ಸುಧಾರಣೆೆ ಪ್ರಕ್ರಿಯೆಯ ಭಾಗವಾಗಿದೆ.

ಸಾಲಮೇಳದ ಎರಡನೇ ಹಂತವು ಅ.21 ಮತ್ತು ಅ.25ರ ನಡುವೆ 150 ಜಿಲ್ಲೆಗಳಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News