ಮಾನವೀಯ ಸೇವೆಯೇ ರಾಷ್ಟ್ರೀಯತೆ ಎಂದು ಭಾವಿಸಿದ್ದ ಗಾಂಧೀಜಿ: ನರೇಂದ್ರ ಮೋದಿ
ಹೊಸದಿಲ್ಲಿ, ಅ.2: ಭಾರತೀಯ ರಾಷ್ಟ್ರೀಯತೆಯು ಸಂಕುಚಿತ ಅಥವಾ ಪ್ರತ್ಯೇಕಿಸುವ ಲಕ್ಷಣ ಹೊಂದಿಲ್ಲ. ಇದು ಮಾನವೀಯ ಸೇವೆ ಸಾಧಿಸುವ ಬದ್ಧತೆ ಹೊಂದಿದೆ ಎಂಬುದು ಮಹಾತ್ಮಾ ಗಾಂಧೀಜಿಯವರ ಪರಿಕಲ್ಪನೆಯಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗಾಂಧೀ ಜಯಂತಿಯ ಸಂದರ್ಭದಲ್ಲಿ ‘ನ್ಯೂಯಾರ್ಕ್ ಟೈಮ್ಸ್’ನಲ್ಲಿ ಬರೆದಿರುವ ‘ಭಾರತಕ್ಕೆ ಹಾಗೂ ವಿಶ್ವಕ್ಕೆ ಗಾಂಧೀಜಿ ಯಾಕೆ ಅಗತ್ಯ? ಎಂಬ ಶೀರ್ಷಿಕೆಯ ಲೇಖನದಲ್ಲಿ ಮೋದಿ, ಮಹಾತ್ಮಾ ಗಾಂಧೀಜಿಯವರ ಸಿದ್ಧಾಂತಗಳನ್ನು ಮುಂದಿನ ತಲೆಮಾರಿನ ಜನತೆ ಸದಾ ಸ್ಮರಿಸಿಕೊಳ್ಳುವಂತಾಗಲು ಹಾಗೂ ಇವನ್ನು ಪಸರಿಸಲು ಚಿಂತಕರು, ಉದ್ಯಮಿಗಳು ಹಾಗೂ ತಂತ್ರಜ್ಞಾನ ಕ್ಷೇತ್ರದ ನಾಯಕರು ಮುಂದೆ ಬರಬೇಕು ಎಂದು ಹೇಳಿದ್ದಾರೆ.
ಒಂದು ಹಿಡಿ ಉಪ್ಪಿಗಾಗಿ ಸಾಮೂಹಿಕ ಅಭಿಯಾನವನ್ನು ಹುಟ್ಟುಹಾಕುವ ಸಾಮರ್ಥ್ಯ ಬೇರೆ ಯಾರಿಗಾದರೂ ಇರಬಹುದೇ ಎಂದು ಗಾಂಧೀಜಿಯವರ ದಾಂಡಿ ಯಾತ್ರೆಯನ್ನು ಉಲ್ಲೇಖಿಸಿ ಪ್ರಶ್ನಿಸಿರುವ ಮೋದಿ, ಮಾನವ ಸಮಾಜದಲ್ಲಿರುವ ಹಲವು ವಿರೋಧಾಭಾಸಗಳ ಮಧ್ಯೆ ಸೇತುವೆ ನಿರ್ಮಿಸುವ ವಿಶಿಷ್ಟ ಸಾಮರ್ಥ್ಯ ಗಾಂಧಿಯವರಲ್ಲಿತ್ತು ಎಂದಿದ್ದಾರೆ.
ಸಮೃದ್ಧ, ದ್ವೇಷ, ಹಿಂಸೆ ಮತ್ತು ಯಾತನೆಯಿಂದ ಮುಕ್ತವಾದ ವಿಶ್ವ ನಿರ್ಮಿಸುವ ಮಹಾತ್ಮಾ ಗಾಂಧೀಜಿಯವರ ಆಶಯ ಈಡೇರಬೇಕಿದ್ದರೆ ನಾವೆಲ್ಲಾ ಹೆಗಲಿಗೆ ಹೆಗಲು ಕೊಟ್ಟು ಮುಂದೆ ಸಾಗಬೇಕಿದೆ. ಇದು ನಾವು ಮಹಾತ್ಮನಿಗೆ ನೀಡುವ ನಿಜವಾದ ಗೌರವವಾಗಿದೆ. ಇತರರ ನೋವನ್ನು ಅರ್ಥೈಸಿಕೊಳ್ಳುವ, ಇತರರ ಸಂಕಟ, ನೋವನ್ನು ಅರಿತುಕೊಳ್ಳುವವನೇ ನಿಜವಾದ ಮಾನವ ಎಂಬ ಅರ್ಥದ ‘ವೈಷ್ಣವ ಜನ ತೊ’ ಶ್ಲೋಕ ಮಹಾತ್ಮಾ ಗಾಂಧೀಜಿಯವರಿಗೆ ಅತ್ಯಂತ ಪ್ರಿಯವಾಗಿತ್ತು.
ಪ್ರತಿಯೊಂದು ಸಮಸ್ಯೆಗೂ ಗಾಂಧಿಯವರಲ್ಲಿ ಪರಿಹಾರವಿತ್ತು. ಅವರೊಬ್ಬ ಉತ್ತಮ ಶಿಕ್ಷಕನಂತೆ ಮಾರ್ಗದರ್ಶನ ನೀಡುವವರಾಗಿದ್ದರು. ಅವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಭಾರತ ಸರಕಾರ ಬೃಹತ್ ಸ್ವಚ್ಛತಾ ಅಭಿಯಾನ ಆರಂಭಿಸಿದೆ. ಇಡೀ ವಿಶ್ವವೇ ನಿಮಗೆ ಶಿರಬಾಗುತ್ತಿದೆ, ಪ್ರಿಯ ಬಾಪೂಜಿ ಎಂದು ಮೋದಿ ತಮ್ಮ ಲೇಖನದ ಅಂತ್ಯದಲ್ಲಿ ಬರೆದಿದ್ದಾರೆ.