ತಮಿಳಿಗೆ ಹೋಲಿಸಿದರೆ ಹಿಂದಿ ಡೈಪರ್ ಧರಿಸಿದ ಪುಟ್ಟ ಮಗುವಿಗೆ ಸಮ: ಕಮಲ್ ಹಾಸನ್

Update: 2019-10-02 17:37 GMT

ಚೆನ್ನೈ,ಅ.2: ತಮಿಳು ಮತ್ತು ಸಂಸ್ಕೃತದಂತಹ ಹಳೆಯ ಭಾಷೆಗಳಿಗೆ ಹೋಲಿಸಿದರೆ ಹಿಂದಿ ಡೈಪರ್ ಧರಿಸಿರುವ ಪುಟ್ಟ ಮಗುವಿಗೆ ಸಮ ಎಂದು ಮಕ್ಕಳ ನೀಧಿ ಮೈಯಮ್ ಪಕ್ಷದ ಅಧ್ಯಕ್ಷ ಮತ್ತು ನಟ ಕಮಲ್ ಹಾಸನ್ ವ್ಯಂಗ್ಯವಾಡಿದ್ದಾರೆ. ಭಾಷೆಗಳ ಪರಿವಾರದಲ್ಲಿ ಹಿಂದಿ ಬಹಳ ಯುವ ಭಾಷೆ. ಹಿಂದಿಯ ಬಗ್ಗೆ ನಾವು ಆದಷ್ಟು ಕಾಳಜಿವಹಿಸಬೇಕು. ಯಾಕೆಂದರೆ ಅದು ನಮ್ಮ ಮಗುವೂ ಹೌದು. ತಮಿಳು, ಸಂಸ್ಕೃತ ಮತ್ತು ತೆಲುಗಿಗೆ ಹೋಲಿಸಿದರೆ ಹಿಂದಿ ಅತ್ಯಂತ ಯುವಭಾಷೆ ಎಂದು ಕಮಲ್ ಚೆನ್ನೈಯ ಲೊಯೊಲ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಭಾಷಾ ರಾಜಕೀಯದ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕಮಲ್, ನನಗೆ ಹಿಂದಿ ಬಗ್ಗೆ ಪ್ರೀತಿ ಮತ್ತು ಒಲವಿದೆ. ಅದು ಕೂಡಾ ಒಂದು ಉತ್ತಮ ಭಾಷೆ. ಆದರೆ ಅದನ್ನು ಯಾರ ಮೇಲೂ ಹೇರಬಾರದು ಎಂದು ಅಭಿಪ್ರಾಯಿಸಿದ್ದಾರೆ. ತಮಿಳನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂದು ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿದ ದಿನವೇ ಕಮಲ್ ಈ ಹೇಳಿಕೆಯನ್ನು ನೀಡಿದ್ದಾರೆ. ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿರುವ ಎಲ್ಲ 22 ಭಾಷೆಗಳನ್ನು ದೇಶದ ಅಧಿಕೃತ ಭಾಷೆಗಳನ್ನಾಗಿ ಮಾಡಬೇಕು ಎಂದು ಡಿಎಂಕೆ ಒತ್ತಾಯ ಮಾಡುತ್ತಲೇ ಬಂದಿದೆ. ಅದರ ಭಾಗವಾಗಿ ತಮಿಳನ್ನು ಮೊದಲು ದೇಶದ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕೆಂದು ಸ್ಟಾಲಿನ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News