ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಅಮಿತ್ ಶಾ ಅವರಿಂದ ಪ್ಲಾಸ್ಟಿಕ್ ವಿರುದ್ಧ ‘ಗಾಂಧಿ ಸಂಕಲ್ಪ ಯಾತ್ರೆ’

Update: 2019-10-02 18:02 GMT

ಹೊಸದಿಲ್ಲಿ, ಅ. 2: ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನವಾದ ಮಂಗಳವಾರ ಏಕ ಬಳಕೆ ಪ್ಲಾಸ್ಟಿಕ್‌ನಿಂದ ದೂರವಿರುವಂತೆ ವಿನಂತಿಸಿರುವ ಗೃಹ ಸಚಿವ ಅಮಿತ್ ಶಾ, ಇದಕ್ಕಾಗಿ ಸಾಮೂಹಿಕ ಚಳವಳಿ ನಡೆಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಗಾಂಧಿ ಜಯಂತಿಯಂದು ಬಿಜೆಪಿಯ ‘ಗಾಂಧಿ ಸಂಕಲ್ಪ ಯಾತ್ರೆ’ಗೆ ಹಸಿರು ನಿಶಾನೆ ತೋರಿಸಿದ ಬಳಿಕ ಅಮಿತ್ ಶಾ ದಿಲ್ಲಿಯ ಬಿಜೆಪಿ ನಾಯಕರೊಂದಿಗೆ ಬಿಗಿ ಭದ್ರತೆ ನಡುವೆ ಪಾದಯಾತ್ರೆ ನಡೆಸಿದರು.

ಪಾದಯಾತ್ರೆ ನಡೆಸುವ ಮುನ್ನ ಅಮಿತ್ ಶಾ ಏಕ ಬಳಕೆ ಪ್ಲಾಸ್ಟಿಕ್‌ನ ಅಪಾಯಗಳ ಬಗ್ಗೆ ಗಮನ ಸೆಳೆದರು. ಈ ಪ್ಲಾಸ್ಟಿಕ್ ಮಣ್ಣಿನೊಂದಿಗೆ ಕರಗಲು 400 ವರ್ಷ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

 ಏಕ ಬಳಕೆ ಪ್ಲಾಸ್ಟಿಕ್‌ನಿಂದ ಪ್ರಾಣಿಗಳ ಮೇಲೆ ಕೂಡ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಅವರು ಹೇಳಿದರು.

ಇದು ಬಿಜೆಪಿ ಕಾರ್ಯಕರ್ತರ ಜವಾಬ್ದಾರಿ. ದೇಶದ ಜನರು ಈ ಬಗ್ಗೆ ಸಾಮೂಹಿಕ ಚಳವಳಿ ನಡೆಸಬೇಕು. ಏಕಬಳಕೆಯ ಪ್ಲಾಸ್ಟಿಕ್ ದೇಶಕ್ಕೆ ಹಾಗೂ ಜಗತ್ತಿಗೆ ಮಾರಕ ಎಂದು ಅವರು ಹೇಳಿದರು.

 ದೇಶದಲ್ಲಿ ಮಹಾತ್ಮಾ ಗಾಂಧಿ ಅವರ ಮೌಲ್ಯಗಳು ಹಾಗೂ ಸಿದ್ಧಾಂತಗಳನ್ನು ಮರು ಸ್ಥಾಪಿಸಲು ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆಯ ದಿನವಾದ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ ಎಂದು ಅಮಿತ್ ಶಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News