ದಿಲ್ಲಿ-ಕಾತ್ರಾ ನಡುವೆ ವಂದೇ ಭಾರತ ಎಕ್ಸ್‌ಪ್ರೆಸ್‌ಗೆ ಗೃಹಸಚಿವ ಅಮಿತ್ ಶಾ ಚಾಲನೆ
ಹೊಸದಿಲ್ಲಿ,ಅ.3: ಗೃಹಸಚಿವ ಅಮಿತ್ ಶಾ ಅವರು ವೈಷ್ಣೋದೇವಿ ಯಾತ್ರಿಕರಿಗೆ ಸೌಲಭ್ಯವನ್ನು ಕಲ್ಪಿಸುವ ದಿಲ್ಲಿ-ಕಾತ್ರಾ ವಂದೇ ಭಾರತ ಎಕ್ಸ್‌ಪ್ರೆಸ್‌ಗೆ ಗುರುವಾರ ಹೊಸದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆಯನ್ನು ತೋರಿಸಿದರು. ಇದು ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಮತ್ತು ಧಾರ್ಮಿಕ ಪ್ರವಾಸೋದ್ಯಮದ ಉತ್ತೇಜನಕ್ಕೆ ಬೃಹತ್ ಉಡುಗೊರೆಯಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ರಾಜ್ಯದ ಅಭಿವೃದ್ಧಿಗೆ ವಿಧಿ 370 ಬಹುದೊಡ್ಡ ತೊಡಕಾಗಿತ್ತು ಮತ್ತು 10 ವರ್ಷಗಳಲ್ಲಿ ಅದು ದೇಶದ ಅತ್ಯಂತ ಅಭಿವೃದ್ಧಿಗೊಂಡ ಪ್ರದೇಶಗಳಲ್ಲಿ ಒಂದಾಗಲಿದೆ ಎಂದರು.
ಮಂಗಳವಾರ ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲಿ ಬೆಳಿಗ್ಗೆ ಆರು ಗಂಟೆಗೆ ಹೊಸದಿಲ್ಲಿ ರೈಲ್ವೆ ನಿಲ್ದಾಣದಿಂದ ನಿರ್ಗಮಿಸುವ ವಂದೇ ಭಾರತ ಎಕ್ಸ್‌ಪ್ರೆಸ್ ಮಧ್ಯಾಹ್ನ ಎರಡು ಗಂಟೆಗೆ ಕಾತ್ರಾ ತಲುಪುತ್ತದೆ. ಮಧ್ಯಾಹ್ನ ಮೂರು ಗಂಟೆಗೆ ಮರುಪ್ರಯಾಣವನ್ನು ಆರಂಭಿಸುವ ಅದು ರಾತ್ರಿ 11 ಗಂಟೆಗೆ ಹೊಸದಿಲ್ಲಿ ರೈಲ್ವೆ ನಿಲ್ದಾಣವನ್ನು ತಲುಪುತ್ತದೆ.
ರೈಲ್ವೆಯು 2022,ಆ.15ಕ್ಕೆ ಮುನ್ನ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶವನ್ನು ಸಂಪರ್ಕಿಸಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದರು.
ಇದು ಎರಡನೇ ವಂದೇ ಭಾರತ ಎಕ್ಸ್‌ಪ್ರೆಸ್ ಆಗಿದ್ದು,ಮೊದಲನೆಯದು ದಿಲ್ಲಿ ಮತ್ತು ವಾರಣಾಸಿ ನಡುವೆ ಸಂಚರಿಸುತ್ತಿದೆ.