×
Ad

ಮನಸಲ್ಲಿ ಗೋಡ್ಸೆ, ಬಾಯಲ್ಲಿ ಮಾತ್ರ ಗಾಂಧಿ: ಕೇಂದ್ರ ಸರಕಾರದ ವಿರುದ್ಧ ಉವೈಸಿ ವಾಗ್ದಾಳಿ

Update: 2019-10-03 20:04 IST

ಔರಂಗಾಬಾದ್, ಅ.3: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಉವೈಸಿ, ಮನಸ್ಸಿನಲ್ಲಿ ಗೋಡ್ಸೆಯನ್ನು ಇಟ್ಟುಕೊಂಡು ಕೇವಲ ಬಾಯ್ಮಾತಿನಲ್ಲಿ ಮಹಾತ್ಮ ಗಾಂಧೀಜಿಯವರ ಆದರ್ಶದ ಬಗ್ಗೆ ಭಾಷಣ ಬಿಗಿಯುತ್ತಿದೆ ಎಂದಿದ್ದಾರೆ.

ನಾವಿಂದು ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ದೇಶದಲ್ಲಿ ಈಗ ಅಧಿಕಾರದಲ್ಲಿರುವವರು ಗೋಡ್ಸೆಯನ್ನು ತಮ್ಮ ನಾಯಕ ಎಂದು ಪರಿಗಣಿಸಿದ್ದಾರೆ. ಬಿಜೆಪಿಯು ಗಾಂಧಿಯ ಹೆಸರಲ್ಲಿ ತನ್ನ ಅಂಗಡಿಯನ್ನು ನಡೆಸುತ್ತಿದೆ. ಗಾಂಧೀಜಿಯ ಹೆಸರು ಹೇಳಿಕೊಂಡು ಇಡೀ ದೇಶವನ್ನು ವಂಚಿಸುತ್ತಿದೆ ಎಂದವರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಔರಂಗಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗೋಡ್ಸೆ ಮೂರು ಗುಂಡು ಹಾರಿಸಿ ಗಾಂಧೀಜಿಯನ್ನು ಹತ್ಯೆ ಮಾಡಿದ. ಆದರೆ ಇಲ್ಲಿ ಪ್ರತೀ ದಿನ ಹಲವು ಜನ ಸಾಯುತ್ತಿದ್ದಾರೆ. ಗಾಂಧೀಜಿಗೆ ರೈತರ ಬಗ್ಗೆ ಕಾಳಜಿಯಿತ್ತು. ಆದರೆ ಈಗಿನ ಕೇಂದ್ರ ಸರಕಾರ ರೈತರ ಬಗ್ಗೆ ನಿರ್ಲಕ್ಷ್ಯದ ಧೋರಣೆ ಹೊಂದಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆ ಪ್ರತೀದಿನ ವರದಿಯಾಗುತ್ತಿದೆ ಎಂದವರು ಹೇಳಿದರು.

ಹೈದರಾಬಾದ್‌ನ ಕಡೆಯ ನಿಝಾಮರು 7 ದಶಕಗಳ ಹಿಂದೆ ಲಂಡನ್‌ನ ಬ್ಯಾಂಕ್‌ನಲ್ಲಿರುವ ಹಣ ಭಾರತಕ್ಕೆ ಸೇರಿದ್ದು ಎಂದು ಲಂಡನ್‌ನ ನ್ಯಾಯಾಲಯ ತೀರ್ಪು ನೀಡಿರುವ ಬಗ್ಗೆ ಪ್ರಸ್ತಾವಿಸಿದ ಅವರು, ಸುಮಾರು 450 ಕೋಟಿ ರೂ. ಮೊತ್ತದ ಈ ಹಣವನ್ನು ಔರಂಗಾಬಾದ್ ನಗರದ ನಿವಾಸಿಗಳಿಗೆ ನೀರು ಪೂರೈಸಲು ಕೇಂದ್ರ ಸರಕಾರ ಬಳಸಬೇಕು. ದೇಶದ ಹಣಕ್ಕಾಗಿ ನಾವು ಹೋರಾಡಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News