ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ, ಅ.3: ಪರಿಶಿಷ್ಟ ಜಾತಿ/ಪಂಗಡ (ದೌರ್ಜನ್ಯ ತಡೆ ) ಕಾಯ್ದೆ 2018ರ 18ಎ ಸೆಕ್ಷನ್‌ಗೆ ತಿದ್ದುಪಡಿ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ಎಸ್ಸಿ/ಎಸ್ಟಿ ಸಮುದಾಯದ ವಿರುದ್ಧ ದೌರ್ಜನ್ಯ ಎಸಗಿದ ಆರೋಪಿಗೆ ನಿರೀಕ್ಷಣಾ ಜಾಮೀನು ಅಲಭ್ಯವಾಗಿಸುವ ಅಂಶವನ್ನು ತಿದ್ದುಪಡಿ ಕಾಯ್ದೆಯಲ್ಲಿ ಮರುಸೇರ್ಪಡೆಗೊಳಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಯ ವಿರುದ್ಧದ ದೂರನ್ನು ಸಾಬೀತುಪಡಿಸುವ ಯಾವುದೇ ಪುರಾವೆ ಸಿಗದಿದ್ದರೆ ಮಾತ್ರ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಬಹುದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಇಲ್ಲಿ ಕಾಯ್ದೆಯನ್ನು ದುರ್ಬಲಗೊಳಿಸುವ ವಿಷಯವೇ ಇಲ್ಲ. ಆದ್ದರಿಂದ ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ )ಕಾಯ್ದೆ 1989ರ ಕೆಲವು ಅಂಶಗಳನ್ನು ಸುಪ್ರೀಂಕೋರ್ಟ್ ಕೈಬಿಡಲು ಸೂಚಿಸಿತ್ತು. ಈ ಕಾಯ್ದೆಯಡಿ ಪ್ರಕರಣ ದಾಖಲಾದೊಡನೆ ಬಂಧಿಸಬಹುದು ಎಂಬ ಅಂಶವನ್ನು ಕೈಬಿಟ್ಟು ನೇಮಕಾತಿ ಪ್ರಾಧಿಕಾರದ ಅನುಮೋದನೆ ಪಡೆದ ಬಳಿಕ ಬಂಧಿಸಬೇಕು ಹಾಗೂ ನಿರೀಕ್ಷಣಾ ಜಾಮೀನು ಪಡೆಯಬಹುದು ಎಂಬ ಅಂಶವನ್ನು ಸೇರಿಸಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾ
ದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಕಾಯ್ದೆಗೆ ತಿದ್ದುಪಡಿ ತಂದು ಪರಿಶಿಷ್ಟ ಜಾತಿ/ಪಂಗಡ (ದೌರ್ಜನ್ಯ ತಡೆ ) ಕಾಯ್ದೆ 2018 ರೂಪಿಸಿತ್ತು. ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ )ಕಾಯ್ದೆ 1989ರ ಯಾವುದೇ ಅಂಶವನ್ನು ತಿದ್ದುಪಡಿ ಕಾಯ್ದೆ ದುರ್ಬಲಗೊಳಿಸುವುದಿಲ್ಲ. ಕಾಯ್ದೆಯ ಸ್ವರೂಪ ಈ ಹಿಂದಿನಂತೆಯೇ ಇರುತ್ತದೆ ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ವಿನೀತ್ ಶರಣ್ ಹಾಗೂ ಎಸ್ ರವೀಂದ್ರ ಭಟ್ ಅವರಿದ್ದ ನ್ಯಾಯಪೀಠ ತಿಳಿಸಿದೆ.