ಎಲ್ಲ ವಲಸಿಗರ ಡಿಎನ್‌ಎ ಮಾದರಿ ಸಂಗ್ರಹಿಸಲು ಮುಂದಾದ ಅಮೆರಿಕ
Update: 2019-10-03 22:06 IST
ವಾಶಿಂಗ್ಟನ್, ಅ. 3: ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ ಬಳಿಕ ಬಂಧಿಸಲ್ಪಟ್ಟ ಎಲ್ಲ ವಲಸಿಗರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲು ಸರಕಾರ ಬಯಸಿದೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ದಾಖಲೆಗೆ ಸೇರದ ಪ್ರತಿಯೊಬ್ಬ ವಲಸಿಗರ ಡಿಎನ್‌ಎ ಮಾದರಿಗಳನ್ನು ಪಡೆದು ಕ್ರಿಮಿನಲ್ ಡಿಎನ್‌ಎ ಪ್ರೊಫೈಲ್‌ಗಳ ರಾಷ್ಟ್ರೀಯ ಮಾಹಿತಿಕೋಶದಲ್ಲಿ ಸಂಗ್ರಹಿಸಿಡಲು ಆಂತರಿಕ ಭದ್ರತೆ ಇಲಾಖೆಯು ಕಾರ್ಯಕ್ರಮವೊಂದನ್ನು ರೂಪಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ನೂತನ ನೀತಿಯು ವಲಸೆ ಮತ್ತು ಗಡಿ ನಿಯಂತ್ರಣ ಏಜಂಟ್‌ಗಳಿಗೆ ವಲಸಿಗರು ಮತ್ತು ಬಂಧಿತರ ಪರಿಸ್ಥಿತಿಯ ವಿಸ್ತೃತ ಚಿತ್ರಣವೊಂದನ್ನು ನೀಡುತ್ತದೆ ಎಂದು ಪತ್ರಕರ್ತರೊಂದಿಗೆ ಅನಧಿಕೃತವಾಗಿ ಮಾತನಾಡಿದ ಅಧಿಕಾರಿಗಳು ಹೇಳಿದರು.