ಪಿಎಂಸಿ ಬ್ಯಾಂಕ್ ಪ್ರಕರಣ: ಸಾರಂಗ್, ರಾಕೇಶ್ ವಾಧ್ವಾನ್ ಬಂಧನ
ಹೊಸದಿಲ್ಲಿ, ಅ.3: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಂಸಿ)ನ ಬಿಕ್ಕಟ್ಟಿಗೆ ಸಂಬಂಧಿಸಿ ಮುಂಬೈ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಎಚ್‌ಡಿಐಎಲ್ ಸಂಸ್ಥೆಯ ನಿರ್ದೇಶಕರಾದ ಸಾರಂಗ್ ವಾಧ್ವಾನ್ ಹಾಗೂ ರಾಕೇಶ್ ವಾಧವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಚ್‌ಡಿಐಎಲ್‌ನಲ್ಲಿ ಆರ್ಥಿಕ ಅವ್ಯವಹಾರ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ ಎಂದು ಸರಕಾರ ಪ್ರಕಟಿಸಿದ ಬಳಿಕ ಈ ಇಬ್ಬರು ನಿರ್ದೇಶಕರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಯಾಗಿತ್ತು. ಆದರೆ ಆರೋಪವನ್ನು ನಿರಾಕರಿಸಿರುವ ಎಚ್‌ಡಿಐಎಲ್, ತಾನು ಸೂಕ್ತ ದಾಖಲೆಪತ್ರ ಮತ್ತು ಭದ್ರತೆ ಒದಗಿಸಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದು ಈ ಕುರಿತು ಮಾಹಿತಿ ಒದಗಿಸಲು ಸಿದ್ಧ ಎಂದು ತಿಳಿಸಿದೆ. ಪಿಎಂಸಿಯಿಂದ ಎಚ್‌ಡಿಐಎಲ್ ಗಣನೀಯ ಪ್ರಮಾಣದಲ್ಲಿ ಸಾಲ ಪಡೆದಿದ್ದು, ಪಿಎಂಸಿ ನೀಡಿರುವ ಸಾಲದಲ್ಲಿ ಶೇ.73 ಎಚ್‌ಡಿಐಎಲ್‌ಗೆ ಸಂದಿದೆ. 2019ರ ಸೆ.19ರಂತೆ 8,880 ಕೋಟಿ ರೂ. ಸಾಲವನ್ನು ಎಚ್‌ಡಿಐಎಲ್‌ಗೆ ನೀಡಿರುವ ಹಿನ್ನೆಲೆಯಲ್ಲಿ ಎಚ್‌ಡಿಐಎಲ್‌ನ ನಿರ್ದೇಶಕರ ವಿರುದ್ಧ ಮುಂಬೈ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದರು.
ಈ ಮಧ್ಯೆ, ಎಚ್‌ಡಿಐಎಲ್‌ಗೆ 6,500 ಕೋಟಿ ರೂ. ಸಾಲವನ್ನು ನಿರ್ದೇಶಕರ ಮಂಡಳಿಯ ಗಮನಕ್ಕೆ ತರದೆ ಮಂಜೂರು ಮಾಡಿರುವುದಾಗಿ ಅಮಾನತಗೊಂಡಿರುವ ಪಿಎಂಸಿ ಬ್ಯಾಂಕ್‌ನ ಆಡಳಿತ ನಿರ್ದೇಶಕ ಜಾಯ್ ಥಾಮಸ್ ಆರ್‌ಬಿಐಗೆ ಬರೆದುಕೊಟ್ಟಿರುವ ತಪ್ಪೊಪ್ಪಿಗೆ ಪತ್ರದಲ್ಲಿ ತಿಳಿಸಿದ್ದಾರೆ. ಕೊಳೆಗೇರಿ ಪ್ರದೇಶವನ್ನು ಅಭಿವೃದ್ಧಿಗೊಳಿಸಿ ಬಳಿಕ ಅದನ್ನು ಇತರ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಮಾರಾಟ ಮಾಡುವುದೂ ಸೇರಿದಂತೆ ವಸತಿ ಸಮುಚ್ಛಯ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಚ್‌ಡಿಐಎಲ್ 2019ರ ಆರ್ಥಿಕ ವರ್ಷದಲ್ಲಿ 601.20 ಕೋಟಿ ರೂ. ಆದಾಯ ಹೊಂದಿರುವುದಾಗಿ ವರದಿಯಾಗಿದೆ.