ಮುಂಬೈನ ಆರೆಯನ್ನು ಅರಣ್ಯ ಪ್ರದೇಶವೆಂದು ಘೋಷಿಸಲು ಬಾಂಬೆ ಹೈಕೋರ್ಟ್ ನಕಾರ

Update: 2019-10-04 15:28 GMT

ಮುಂಬೈ,ಅ.4: ಮೆಟ್ರೋ ರೈಲು ಡಿಪೋದ ನಿರ್ಮಾಣಕ್ಕಾಗಿ ಮುಂಬೈನ ಆರೆ ಅರಣ್ಯದಲ್ಲಿನ 2,646 ಮರಗಳನ್ನು ಕಡಿಯಲು ಅವಕಾಶ ನೀಡಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಬಾಂಬೆ ಉಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ. ಈ ಪ್ರದೇಶಕ್ಕೆ ಅರಣ್ಯ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಸರಕಾರವು ಕಳೆದ ತಿಂಗಳು ನ್ಯಾಯಾಲಯಕ್ಕೆ ತಿಳಿಸಿತ್ತು.

 ಪರಿಸರವಾದಿ ಜೋರೂ ಭಥೇನಾ ಅವರು ಮರಗಳನ್ನು ಕಡಿಯಲು ಅನುಮತಿ ನೀಡಿರುವ ಬಿಎಂಸಿಯ ಆ.29ರ ನಿರ್ಣಯವನ್ನು ಪ್ರಶ್ನಿಸಿದ್ದರೆ,ಆರೆ ಕಾಲನಿಯ 1000 ಹೆಕ್ಟೇರ್‌ಗೂ ಅಧಿಕ ಪ್ರದೇಶವನ್ನು ಭಾರತೀಯ ಅರಣ್ಯ ಕಾಯ್ದೆಯಡಿ ‘ಪರಿಸರ ಸೂಕ್ಷ್ಮ ವಲಯ’ ಎಂದು ಘೋಷಿಸುವಂತೆ ಎನ್‌ಜಿಒ ವನಶಕ್ತಿ ನ್ಯಾಯಾಲಯವನ್ನು ಆಗ್ರಹಿಸಿತ್ತು.

ಮೆಟ್ರೋ ಕಾರ್ ಡಿಪೋದ ನಿರ್ಮಾಣಕ್ಕಾಗಿ ಆರೆಯ 30 ಎಕರೆ ಪ್ರದೇಶದಲ್ಲಿನ ಮರಗಳನ್ನು ಕಡಿಯುವ ಬಿಎಂಸಿಯ ನಿರ್ಣಯದ ವಿರುದ್ಧ ಕಳೆದ ಕೆಲವು ವಾರಗಳಿಂದ ಪರಿಸರವಾದಿಗಳು ಹಲವಾರು ಪ್ರತಿಭಟನೆಗಳನ್ನು ನಡೆಸಿದ್ದರು. ಕಡಿಯಲಾಗುವ ಮರಗಳ ಸಂಖ್ಯೆಯ ಮೂರು ಪಟ್ಟು ಗಿಡಗಳನ್ನು ಬೇರೆ ಸ್ಥಳಗಳಲ್ಲಿ ನೆಡುವುದಾಗಿ ಮುಂಬೈ ಮೆಟ್ರೋ ರೇಲ್ ಕಾರ್ಪೊರೇಷನ್ ಹೇಳಿದ್ದರೆ,ಕಾರ್ ಡಿಪೋವನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದರು.

 ಕಳೆದ ತಿಂಗಳು ಮೆಟ್ರೋ ಯೋಜನೆಯನ್ನು ಬೆಂಬಲಿಸಿ ಟ್ವೀಟಿಸಿದ್ದ ನಟ ಅಮಿತಾಭ್ ಬಚ್ಚನ್ ಅವರ ಜುಹು ನಿವಾಸದ ಹೊರಗೆ ನೆರೆದಿದ್ದ ಪ್ರತಿಭಟನಾಕಾರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News