ಜಮ್ಮು ಕಾಶ್ಮೀರದ ಮಕ್ಕಳ ಬಗ್ಗೆಯೂ ಆತಂಕವಿದೆ: ಕೈಲಾಶ್ ಸತ್ಯಾರ್ಥಿ

Update: 2019-10-04 17:02 GMT

ಇಂದೋರ್, ಅ.4: ದೇಶದ ಇತರೆಡೆಯ ಮಕ್ಕಳ ಬಗ್ಗೆ ಇರುವಷ್ಟೇ ಆತಂಕ ಜಮ್ಮು ಮತ್ತು ಕಾಶ್ಮೀರದ ಮಕ್ಕಳ ಬಗ್ಗೆ ಇದೆ ಎಂದು ನೋಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಹೇಳಿದ್ದಾರೆ. ಕಾಶ್ಮೀರ ಭಾರತದ ಭಾಗವಾಗಿದೆ. ಆದರೆ ಅದರ ಅರ್ಧಭಾಗವನ್ನು ನಮ್ಮ ನೆರೆದೇಶ(ಪಾಕಿಸ್ತಾನ) ಆಕ್ರಮಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕದ ಪರಿಸ್ಥಿತಿಯನ್ನು ತಾಳ್ಮೆಯಿಂದ ಗಮನಿಸಬೇಕು. ಅಲ್ಲಿ ಸಮಸ್ಯೆಯಿದೆ, ಆದರೆ ಅದು ಸುದೀರ್ಘ ಕಾಲ ಇರಲಾರದು ಎಂದು ಸತ್ಯಾರ್ಥಿ ಹೇಳಿದ್ದಾರೆ.

ವಿಶ್ವದಾದ್ಯಂತ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಮಕ್ಕಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಸತ್ಯಾರ್ಥಿ ಇಂದೋರ್‌ನ ಶಾಲೆಯೊಂದರಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ವಿಶ್ವದಾದ್ಯಂತ ಮಕ್ಕಳ ಹಕ್ಕುಗಳ ಕುರಿತ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈಗ ಸಾಗುತ್ತಿರುವ ವೇಗದಲ್ಲೇ ಮುಂದುವರಿದರೆ 2030ರ ವೇಳೆಗೆ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸಿದ ಹೊರತಾಗಿಯೂ ವಿಶ್ವದ 22 ಕೋಟಿ ಮಕ್ಕಳು ಶಾಲೆಯಿಂದ ಹೊರಗುಳಿಯಲಿದ್ದಾರೆ ಮತ್ತು 12 ಕೋಟಿ ಮಕ್ಕಳು ಬಾಲಕಾರ್ಮಿಕರಾಗಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

 ಮುಂಗಡ ಪತ್ರದಲ್ಲಿ ದೊಡ್ಡ ಪ್ರಮಾಣದ ಮೊತ್ತವನ್ನು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆಗಾಗಿ ಮೀಸಲಿಡಬೇಕೆಂದು ಕೇಂದ್ರ ಸರಕಾರವನ್ನು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News