ವಯನಾಡ್: 766 ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿರ್ಬಂಧ ಪ್ರತಿಭಟನೆಗೆ ಕೈ ಜೋಡಿಸಿದ ರಾಹುಲ್ ಗಾಂಧಿ

Update: 2019-10-04 16:58 GMT

ವಯನಾಡ್, ಅ. 4: ಕೇರಳದ ಬಂಡಿಪುರ ಹುಲಿ ಸಂರಕ್ಷಣಾ ಪ್ರದೇಶದ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿ ರಾತ್ರಿ ಪ್ರಯಾಣ ನಿಷೇಧಿಸಿರುವುದನ್ನು ವಿರೋಧಿಸಿ ಇಲ್ಲಿನ ಸುಲ್ತಾನ್ ಬತ್ತೇರಿಯಲ್ಲಿ ಉಪವಾಸ ಮುಷ್ಕರ ನಡೆಸುತ್ತಿರುವ ಪ್ರತಿಭಟನಕಾರರಿಗೆ ಶುಕ್ರವಾರ ಇಲ್ಲಿಗೆ ಆಗಮಿಸಿದ ಕಾಂಗ್ರೆಸ್ ನಾಯಕ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕೇರಳ ಕರ್ನಾಟಕವನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ದಿನನಿತ್ಯ 9 ಗಂಟೆಗಳ ಸಂಚಾರ ನಿರ್ಬಂಧ ವಿರೋಧಿಸಿ ಸೆಪ್ಟಂಬರ್ 25ರಿಂದ ಅನಿರ್ದಿಷ್ಟಾವಧಿ ಉಪಾವಾಸ ಮುಷ್ಕರ ಆರಂಭಿಸಲಾಗಿದೆ. ಉಪವಾಸ ಮುಷ್ಕರದಲ್ಲಿ ಪಾಲ್ಗೊಂಡ ಯುವ ನಾಯಕರನ್ನು ಭೇಟಿಯಾದ ರಾಹುಲ್ ಗಾಂಧಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಮುಷ್ಕರ ರಾಜಿ ಪರಿಹಾರಕ್ಕೆ ತಲುಪಲಿದೆ ಎಂಬ ಭರವಸೆ ನನಗಿದೆ. ಈ ವಿಷಯದ ಕುರಿತು ಪಕ್ಷಗಳ ನಡುವೆ ಯಾವುದೇ ರಾಜಕೀಯ ಭಿನ್ನಾಭಿಪ್ರಾಯ ಇಲ್ಲ ಎಂದು ಅವರು ಹೇಳಿದರು.

‘‘ಈ ನಿರ್ಬಂಧದಿಂದ ಸಮಸ್ಯೆ ಎದುರಿಸುತ್ತಿರುವ ಹಲವರನ್ನು ಈ ಯುವಕರು ಪ್ರತಿನಿಧಿಸುತ್ತಿದ್ದಾರೆ. ನಿರ್ಬಂಧವನ್ನು ಎಲ್ಲರೂ ಪಕ್ಷ ಬೇಧ ಮರೆತು ವಿರೋಧಿಸುತ್ತಿದ್ದಾರೆ. ವಯನಾಡ್ ಜನರಿಗೆ ಲಾಭವಾಗುವ ರಾಜಿ ಪರಿಹಾರಕ್ಕೆ ಈ ಮುಷ್ಕರ ತಲುಪಲಿದೆ ಎಂಬ ಭರವಸೆ ನನಗಿದೆ’’ ಎಂದು ಅವರು ಹೇಳಿದರು.

ವಯನಾಡ್‌ಗೆ ಯಾವುದೇ ಅನ್ಯಾಯ ಆಗಬಾರದು. ಪಾರದರ್ಶಕತೆ ಅತ್ಯಂತ ಮುಖ್ಯ. ನಾನು ನಮ್ಮ ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರಲ್ಲಿ ನೆರವು ನೀಡುವಂತೆ ಕೋರಿದ್ದೇನೆ. ವಯನಾಡ್ ಸಮಸ್ಯೆಗೆ ಸಂಬಂಧಿಸಿ ದೇಶದಲ್ಲಿ ಲಭ್ಯವಿರುವ ಅತ್ಯುತ್ತಮ ಕಾನೂನು ತಜ್ಞರ ನೆರವು ಪಡೆಯಲಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News