ಅಯೋಧ್ಯೆ ಪ್ರಕರಣ: ಅ.17ಕ್ಕೆ ವಿಚಾರಣೆ ಮುಕ್ತಾಯ: ಸುಪ್ರೀಂಕೋರ್ಟ್
Update: 2019-10-04 22:53 IST
ಹೊಸದಿಲ್ಲಿ, ಅ.4: ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ಈ ಹಿಂದೆ ನಿಗದಿಗೊಳಿಸಿದ ದಿನಕ್ಕಿಂತ ಒಂದು ದಿನ ಮೊದಲೇ, ಅಕ್ಟೋಬರ್ 17ರಂದು ಮುಕ್ತಾಯಗೊಳಿಸುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯಿ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠ 37ನೇ ದಿನದ ವಿಚಾರಣೆ ಮುಗಿಸಿದ ಬಳಿಕ ಅಂತಿಮ ಹಂತದ ವಾದ ವಿವಾದಕ್ಕೆ ವೇಳಾಪಟ್ಟಿ ಅಂತಿಮಗೊಳಿಸಿದೆ.
ಮುಸ್ಲಿಂ ಸಂಘಟನೆಗಳು ತಮ್ಮ ವಾದಗಳನ್ನು ಅಕ್ಟೋಬರ್ 14ರೊಳಗೆ ಪೂರ್ಣಗೊಳಿಸಬೇಕು. ಆ ಬಳಿಕ ಹಿಂದು ಸಂಘಟನೆಗಳಿಗೆ ಎರಡು ದಿನದ ಅವಕಾಶವಿದೆ. ಅಕ್ಟೋಬರ್ 17 ವಿಚಾರಣೆ ಮುಕ್ತಾಯಗೊಳಿಸುವ ದಿನವಾಗಿದ್ದು ಅಂದು ಎಲ್ಲಾ ಪಕ್ಷಗಳೂ ತಮ್ಮ ಅಂತಿಮ ವಾದವನ್ನು ಮಂಡಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ. ಸಿಜೆಐ ಗೊಗೊಯಿ ನವೆಂಬರ್ 17ರಂದು ನಿವೃತ್ತರಾಗಲಿದ್ದು ಅದಕ್ಕೂ ಮೊದಲು ಈ ಪ್ರಕರಣದ ತೀರ್ಪು ಹೊರಬೀಳುವ ನಿರೀಕ್ಷೆಯಿದೆ.