×
Ad

ಪಿಎಂಸಿ ಬ್ಯಾಂಕ್‌ನ ಅಮಾನತುಗೊಂಡ ಎಂಡಿ ಜೋಯ್ ಥಾಮಸ್ ಬಂಧನ

Update: 2019-10-04 23:24 IST

ಹೊಸದಿಲ್ಲಿ, ಅ. 4: 4,335 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್-ಮಹಾರಾಷ್ಟ್ರ ಕೋ-ಆಪರೇಟಿವ್ (ಪಿಎಂಸಿ) ಬ್ಯಾಂಕ್‌ನ ಮಾಜಿ ಆಡಳಿತ ನಿರ್ದೇಶಕ ಜೋಯ್ ಥೋಮಸ್‌ನನ್ನು ಮುಂಬೈ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಜೋಯ್ ಥಾಮಸ್ ಆರ್‌ಬಿಐಗೆ ಬರೆದ ಪತ್ರದಲ್ಲಿ ವಂಚನೆ ನಡೆದಿರುವುದನ್ನು ಒಪ್ಪಿಕೊಂಡಿದ್ದು, ಪಿಎಂಸಿ ಬ್ಯಾಂಕ್‌ನ ಪ್ರತಿಷ್ಠೆ ಕಾಪಾಡಲು ಅದನ್ನು ಮುಚ್ಚಿಟ್ಟಿರುವುದಾಗಿ ತಿಳಿಸಿದ್ದ. ಅನಂತರ ಜೋಯ್ ಥಾಮಸ್‌ಗೆ ಆರ್ಥಿಕ ಅಪರಾಧ ವಿಭಾಗದ ಕಚೇರಿಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಅಲ್ಲಿ ಅವರನ್ನು ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಥಿಕ ಅಪರಾಧ ವಿಭಾಗ ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದ ಬಳಿಕ ಜಾರಿ ನಿರ್ದೇಶನಾಲಯ ಮುಂಬೈ ಸುತ್ತಮುತ್ತ 6 ಸ್ಥಳಗಳಲ್ಲಿ ದಾಳಿ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿ ಆರ್ಥಿಕ ಅಪರಾಧಗಳ ವಿಭಾಗ ಗುರುವಾರ ಎಚ್‌ಡಿಐಎಲ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ರಾಕೇಶ್ ವಾಧ್ವಾನ್ ಹಾಗೂ ಆತನ ಪುತ್ರ ಸಾರಂಗ್‌ನನ್ನು ಬಂದಿಸಿತ್ತು. ಅವರನ್ನು ಅಕ್ಟೋಬರ್ 9ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

 ಬ್ಯಾಂಕ್‌ಗೆ 4,353.43 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ ಹಿನ್ನೆಲೆಯಲ್ಲಿ ಪಿಎಂಸಿ ಬ್ಯಾಂಕ್ ಹಾಗೂ ಎಚ್‌ಡಿಐಎಲ್‌ನ ಹಿರಿಯ ಅಧಿಕಾರಿಗಳ ವಿರುದ್ಧ ಆರ್ಥಿಕ ಅಪರಾಧಗಳ ವಿಭಾಗ ಸೋಮವಾರ ಎಫ್‌ಐಆರ್ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News