ಉಪಯೋಗಕ್ಕಿಲ್ಲದ ಎಟಿಎಂಗಳು

Update: 2019-10-04 18:25 GMT

ಮಾನ್ಯರೇ,

ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ, ಜಂಕ್ಷನ್ ಸೇರಿದಂತೆ ಹಲವು ಬ್ಯಾಂಕ್‌ಗಳ ಎಟಿಎಂಗಳಿವೆ. ಆದರೆ ಅವು ಯಾವುವೂ ಸರಿಯಾಗಿ ಕಾರ್ಯಾಚರಿಸುತ್ತಿಲ್ಲ. ಬಹುತೇಕ ಎಟಿಎಂಗಳು ಸರಿ ಇಲ್ಲ. ಸರಿ ಇರುವ ಎಟಿಂಗಳಲ್ಲಿ ಹಣ ಇರುವುದಿಲ್ಲ.

ಮುಡಿಪು- ಬಾಕ್ರಬೈಲು ಮಾರ್ಗವಾಗಿ, ಸಾಲೆತ್ತೂರು, ಪರ್ತಿಪ್ಪಾಡಿ, ಕೊಡುಂಗಾಯಿ, ಕಡಂಬು ಮೂಲಕ ವಿಟ್ಲಕ್ಕೆ ಬರುವ ದಾರಿಯಲ್ಲಿ ಸಾಲೆತ್ತೂರಿನಲ್ಲಿ ಮಾತ್ರ ಒಂದೇ ಒಂದು ಎಟಿಎಂ ಇದ್ದು, ಸಿಂಡಿಕೇಟ್ ಬ್ಯಾಂಕ್ ನ ಈ ಎಟಿಎಂ, ಬ್ಯಾಂಕ್ ಮುಚ್ಚುವ ಹೊತ್ತಿನಲ್ಲಿ ಮುಚ್ಚುತ್ತದೆ. ಬ್ಯಾಂಕ್ ತೆರೆಯುವಾಗಲಷ್ಟೇ ತೆರೆಯುತ್ತದೆ. ಒಂದು ವೇಳೆ ಈ ಎಟಿಎಂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರೆ ಸಾಲೆತ್ತೂರಿನ ಜನತೆ ಒಂದೋ ವಿಟ್ಲಕ್ಕೆ ಅಥವಾ ಮುಡಿಪು ಕಡೆಗೆ ಹೋಗಬೇಕು. ವಿಟ್ಲಕ್ಕೆ ಹೋದರೂ ಅಲ್ಲಿರುವ ಏಳೆಂಟು ಎಟಿಎಂಗಳು ಕೂಡಾ ಸರಿ ಇರದೆ, ಸರಿ ಇದ್ದವುಗಳಲ್ಲಿ ಸಮರ್ಪಕ ಹಣ ಇರದೆ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ.

ಇತ್ತ ಇರಾ, ಮಂಚಿ, ಕುಕ್ಕಾಜೆ ಕಡೆಗೆ ಹೊರಟರೆ, ಅಲ್ಲಿಯೂ ಒಂದೇ ಒಂದು ಎಟಿಎಂ ಇಲ್ಲ. ಅಲ್ಲಿನ ಜನರೂ ಎಟಿಎಂಗಾಗಿ ಮುಡಿಪು ಕಡೆಗೆ ಹೋಗುವ ಪರಿಸ್ಥಿತಿ ಇದೆ. ತುರ್ತಾಗಿ ಹಣ ಬೇಕಾದರೆ ಒದ್ದಾಡುವ ಪರಿಸ್ಥಿತಿ ಇದೆ. ನೇರವಾಗಿ ಬ್ಯಾಂಕ್ ಗೆ ಹೋಗಿ ಹಣ ಪಡೆಯುವುದಾದರೂ, ಎಟಿಎಂನ ಸಮಸ್ಯೆಯಿಂದಲೇ ಬ್ಯಾಂಕ್‌ನಲ್ಲೂ ದೊಡ್ಡ ಸರತಿ ಸಾಲು ಇರುತ್ತದೆ. ಅಲ್ಲಿ ಹಣಕ್ಕಾಗಿ ಕಾದು ಕಾದು ಹೈರಾಣಾಗಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮನೆಗೆ ಅಗತ್ಯ ದಿನಸಿ ಸಾಮಾನುಗಳನ್ನು ಖರೀದಿಸಲು ಕೆಲವೊಮ್ಮೆ ಸಮಸ್ಯೆ ಉಂಟಾಗುತ್ತದೆ. ಕೈಯಲ್ಲಿ ದುಡ್ಡು ಇಲ್ಲದೆ, ಬ್ಯಾಂಕ್ ಖಾತೆಯಲ್ಲಿ ಇರುವುದರಿಂದ ವ್ಯಾಪಾರಸ್ಥರ ಬಳಿ ಸಾಲ ಪಡೆಯಬೇಕಾಗಿ ಬರುತ್ತದೆ. ಆದರೆ ಈಗಿನ ಪರಿಸ್ಥಿತಿ ಗಮನಿಸಿದರೆ ಯಾರೂ ಸಾಲ ನೀಡುವ ಸ್ಥಿತಿಯಲ್ಲಿ ಇಲ್ಲ. ಇಂತಹ ಸಮಸ್ಯೆಯನ್ನು ಬಗೆಹರಿಸಲು ಪ್ರತೀ ಅಂಗಡಿಗಳಲ್ಲಿ ಆನ್ ಲೈನ್ ಸೇವೆಯ ವ್ಯವಸ್ಥೆ ಕಡ್ಡಾಯಗೊಳಿಸುವುದು ಉತ್ತಮ. ಇಲ್ಲದಿದ್ದರೆ ಪ್ರತೀ ಊರಿನಲ್ಲಿ ಅಥವಾ ಇಂತಿಷ್ಟು ದೂರಕ್ಕೆ ಎಟಿಎಂ ಸೌಲಭ್ಯ ಇರುವಂತೆ ವ್ಯವಸ್ಥೆ ಮಾಡಿಕೊಟ್ಟರೆ ಜನರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಬಹುದು. ಈ ನಿಟ್ಟಿನಲ್ಲಿ, ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.

Writer - -ಮುಹಮ್ಮದ್ ಶರೀಫ್, ಕಾಡುಮಠ

contributor

Editor - -ಮುಹಮ್ಮದ್ ಶರೀಫ್, ಕಾಡುಮಠ

contributor

Similar News