ತನ್ನ ಸಾವಿನ ವದಂತಿ ತಳ್ಳಿ ಹಾಕಿದ ನಬಿ

Update: 2019-10-06 07:02 GMT

ಕಾಬೂಲ್,ಅ.5: ಟ್ವಿಟರ್‌ನಲ್ಲಿ ಕಳೆದ ಶುಕ್ರವಾರದಿಂದ ಹರಿದಾಡುತ್ತಿರುವ ತನ್ನ ಸಾವಿನ ಸುದ್ದಿಯನ್ನು ತಳ್ಳಿ ಹಾಕಿರುವ ಅಫ್ಘಾನಿಸ್ತಾನದ ಆಲ್‌ರೌಂಡ್ ಕ್ರಿಕೆಟಿಗ ಮುಹಮ್ಮದ್ ನಬಿ ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮುಹಮ್ಮದ್ ನಬಿ ತನ್ನ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದು ತಾನು ಆರೋಗ್ಯವಂತನಾಗಿದ್ದು ತನ್ನ ಸಾವಿನ ಸುದ್ದಿ ಕೆಲವು ಮಾಧ್ಯಮಗಳು ಸೃಷ್ಟಿಸಿದ ಕಟ್ಟುಕತೆ ಎಂದು ತಿಳಿಸಿದ್ದಾರೆ. 34ರ ಹರೆಯದ ನಬಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಕಾಡ್ಗಿಚ್ಚಿನಂತೆ ಹರಿದಾಡಿ ಕ್ರಿಕೆಟ್ ಅಭಿಮಾನಿಗಳು, ಮುಖ್ಯವಾಗಿ ನಬಿ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಈ ಸುದ್ದಿ ಹರಡಿದ ಕೆಲವೇ ಗಂಟೆಗಳಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ, ನಬಿ ತನ್ನ ತಂಡದ ಇತರ ಸದಸ್ಯರ ಜೊತೆ ಕಾಬೂಲ್ ಮೈದಾನದಲ್ಲಿ ತರಬೇತಿಯಲ್ಲಿ ಪಾಲ್ಗೊಂಡಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿತ್ತು.

ಇದರ ಹೊರತಾಗಿಯೂ ನಬಿ ಸಾವಿನ ಸುದ್ದಿ ವ್ಯಾಪಕವಾಗಿ ಹರಡುತ್ತಲೇ ಇದ್ದ ಕಾರಣ ನಬಿ ಖುದ್ದಾಗಿ ಈ ಕುರಿತು ಸ್ಪಷ್ಟನೆ ನೀಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಭಾರತದ ಸುರೇಶ್ ರೈನಾ, ನ್ಯೂಝಿಲೆಂಡ್‌ನ ಬ್ರೆಂಡನ್ ಮೆಕಲಮ್ ಮತ್ತು ಪಾಕಿಸ್ತಾನದ ಅಬ್ದುಲ್ ರಝಾಕ್‌ರಂತಹ ಅಂತರ್‌ರಾಷ್ಟ್ರೀಯ ಕ್ರಿಕೆಟಿಗರೂ ಇಂತಹ ಸುಳ್ಳು ಸುದ್ದಿಗಳ ಬಲಿಪಶುಗಳಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News