×
Ad

ಪುತ್ರ ನಾಪತ್ತೆಯಾಗಿ 3 ವರ್ಷ: ಅಮಿತ್ ಶಾ ಮನೆಗೆ ಜಾಥಾ ತೆರಳಲು ನಜೀಬ್ ತಾಯಿ ನಿರ್ಧಾರ

Update: 2019-10-06 20:58 IST

ಹೊಸದಿಲ್ಲಿ, ಅ.6: ಜೆಎನ್‌ಯು ವಿದ್ಯಾರ್ಥಿ ನಜೀಬ್ ನಾಪತ್ತೆಯಾಗಿ ಅಕ್ಟೋಬರ್ 15ಕ್ಕೆ ಮೂರು ವರ್ಷ ಸಂದರೂ ಅವರನ್ನು ಪತ್ತೆಹಚ್ಚುವಲ್ಲಿ ಸರಕಾರದ ನಿಷ್ಕ್ರಿಯತೆಯನ್ನು ಖಂಡಿಸಿ ಅಕ್ಟೋಬರ್ 15ರಂದು ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ಜಾಥಾ ತೆರಳುವುದಾಗಿ ನಜೀಬ್ ತಾಯಿ ಫಾತಿಮಾ ಹೇಳಿದ್ದಾರೆ.

ಜೆಎನ್‌ಯು ವಿದ್ಯಾರ್ಥಿ ನಜೀಬ್ 2016ರ ಅಕ್ಟೋಬರ್ 15ರಂದು ನಿಗೂಢವಾಗಿ ನಾಪತ್ತೆಯಾಗಿದ್ದರು. ಮಗನ ಪತ್ತೆ ಕಾರ್ಯಕ್ಕೆ ತನ್ನಲ್ಲಿದ್ದ ಹಣವನ್ನೆಲ್ಲಾ ಖರ್ಚು ಮಾಡಿದ್ದೇನೆ. ಆದರೂ ಪಟ್ಟು ಬಿಡದೆ ಹೋರಾಟ ಮುಂದುವರಿಸಿದ್ದು ಇದೀಗ ಅಕ್ಟೋಬರ್ 15ರಂದು ಗೃಹ ಸಚಿವ ಅಮಿತ್ ಶಾ ಮನೆಗೆ ಜಾಥಾ ನಡೆಸಲಿದ್ದೇನೆ ಎಂದು ದಿಲ್ಲಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ನಜೀಬ್ ತಾಯಿ ಫಾತಿಮ ತಿಳಿಸಿದ್ದಾರೆ.

2018ರ ಡಿಸೆಂಬರ್‌ನಲ್ಲಿ ಬುಲಂದ್‌ಶಹರ್‌ನಲ್ಲಿ ಗುಂಪಿನಿಂದ ಹತ್ಯೆಗೊಳಗಾದ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಅವರ ಪತ್ನಿ ರಜನಿ ಸಿಂಗ್, ಜೂನ್‌ನಲ್ಲಿ ಗುಂಪಿನಿಂದ ಹಲ್ಲೆಗೊಳಗಾಗಿ ಮೃತಪಟ್ಟ ತಬ್ರೇಝ್ ಅನ್ಸಾರಿಯ ಕುಟುಂಬದವರು, 2017ರ ಸೆಪ್ಟೆಂಬರ್‌ನಲ್ಲಿ ಗುಂಡೇಟಿನಿಂದ ಮೃತಪಟ್ಟ ಗೌರಿ ಲಂಕೇಶ್ ಅವರ ಕುಟುಂಬದವರು ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಯುನೈಟೆಡ್ ಎಗೈನ್ಸ್ಟ್ ಹೇಟ್(ಯುಎಎಚ್) ಸಂಘಟನೆಯ ಕಾರ್ಯಕರ್ತರು ತಿಳಿಸಿದ್ದಾರೆ.

ನಜೀಬ್ ಐಸಿಸ್‌ಗೆ ಸೇರ್ಪಡೆಗೊಂಡಿದ್ದಾನೆ ಎಂದು ಟ್ವೀಟ್ ಮಾಡಿದ್ದ ಬಿಜೆಪಿ ಮುಖಂಡ ಕಪಿಲ್ ಮಿಶ್ರರ ಹೇಳಿಕೆಯಿಂದ ತುಂಬಾ ನೋವಾಗಿದೆ. ರಾಜಕೀಯ ಮುಖಂಡರು ತಮ್ಮಿಂದ ಸಾಧ್ಯವಿದ್ದಷ್ಟು ಮಟ್ಟಿಗೆ ಮಗನ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಕೆಲವು ಮಾಧ್ಯಮ ಸಂಸ್ಥೆಗಳೂ ಕೈಜೋಡಿಸಿವೆ ಎಂದು ಫಾತಿಮಾ ಹೇಳಿದರು. ಕಪಿಲ್ ಮಿಶ್ರಾ   ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದ್ದಾರೆ.

2017ರ ಅಕ್ಟೋಬರ್‌ನಲ್ಲಿ ದಿಲ್ಲಿ ಹೈಕೋರ್ಟ್‌ನ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ಫಾತಿಮಾರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News