ಸಂಸತ್ ನವೀಕರಣ ಯೋಜನೆಗೆ ವಿದೇಶಿ ಕಂಪೆನಿಗಳು ಬಿಡ್ ದಾಖಲಿಸಿಲ್ಲ: ಕೇಂದ್ರ
ಹೊಸದಿಲ್ಲಿ, ಅ.6: ಸಂಸತ್ ಭವನವನ್ನು ನವೀಕರಣಗೊಳಿಸುವ ಮತ್ತು ಸಾಮಾನ್ಯ ಕೇಂದ್ರೀಯ ಕಾರ್ಯಾಲಯ ಅಭಿವೃದ್ಧಿಪಡಿಸುವ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯ ಇಂಜಿನಿಯರಿಂಗ್ ಮತ್ತು ನಿರ್ಮಾಣಕ್ಕಾಗಿ ಯಾವುದೇ ವಿದೇಶಿ ಕಂಪೆನಿ ಬಿಡ್ ದಾಖಲಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಕೇಂದ್ರೀಯ ಸಾರ್ವಜನಿಕ ಕಾರ್ಯ ಇಲಾಖೆ ನಡೆಸುವ ಈ ಯೋಜನೆಗೆ ಆರು ಭಾರತೀಯ ವಿನ್ಯಾಸ ಸಂಸ್ಥೆಗಳು ಬಿಡ್ ದಾಖಲಿಸಿವೆ.
ಮೋದಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಬಿಡ್ ಹಾಕಲು ಸಚಿವಾಲಯ ಸೆಪ್ಟಂಬರ್ 2ರಂದು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ವಿನ್ಯಾಸ ಮತ್ತು ಇಂಜಿನಿಯರಿಂಗ್ ಕಂಪೆನಿಗಳಿಗೆ ಆಹ್ವಾನ ನೀಡಿತ್ತು. ಬಿಡ್ ಸಲ್ಲಿಸಲು ಸೆಪ್ಟಂಬರ್ 30 ಅಂತಿಮ ದಿನವಾಗಿತ್ತು. ಇದೊಂದು ಬೃಹತ್ ಯೋಜನೆಯಾಗಿದ್ದ ಕಾರಣ ವಿದೇಶಿ ಕಂಪೆನಿಗಳೂ ಬಿಡ್ ದಾಖಲಿಸುವ ನಿರೀಕ್ಷೆಯಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ವಿದೇಶಿ ಕಂಪೆನಿ ಬಿಡ್ ದಾಖಲಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಈ ಬಿಡ್‌ನಲ್ಲಿ ಗೆಲ್ಲುವ ಭಾರತೀಯ ಸಂಸ್ಥೆಗಳು ತಮ್ಮ ಸಲಹೆಗಾರ ಸಂಸ್ಥೆಯಾಗಿ ವಿದೇಶಿ ಕಂಪೆನಿಯ ನೆರವನ್ನೂ ಪಡೆಯಬಹುದಾಗಿದೆ.