×
Ad

ಪ್ರಧಾನಿಗೆ ಪತ್ರ ಬರೆದಿದ್ದ 49 ಗಣ್ಯರ ವಿರುದ್ಧ ಕೇಂದ್ರ ದೇಶದ್ರೋಹ ಪ್ರಕರಣ ದಾಖಲಿಸಿಲ್ಲ: ಜಾವಡೇಕರ್

Update: 2019-10-06 21:34 IST

ಹೊಸದಿಲ್ಲಿ, ಅ.6: ದೇಶದಲ್ಲಿ ಗುಂಪಿನಿಂದ ಹತ್ಯೆಗಳು ನಡೆಯುತ್ತಿರುವುದನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದ 49 ಗಣ್ಯವ್ಯಕ್ತಿಗಳ ವಿರುದ್ಧ ಸರಕಾರವು ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು ಹೇಳಿದ್ದಾರೆ.

ಬಿಹಾರದ ಮುಝಫ್ಫರ್‌ಪುರದ ವಕೀಲ ಸುಧೀರ್ ಕುಮಾರ ಓಝಾ ಎನ್ನುವವರು 49 ಗಣ್ಯರ ವಿರುದ್ಧ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಶುಕ್ರವಾರ ಪೋಲೀಸರು ಈ 49 ಜನರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಜಾವಡೇಕರ, ‘ಓರ್ವ ವ್ಯಕ್ತಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು,ಅದು ತನ್ನ ಆದೇಶವನ್ನು ನೀಡಿದೆ. ಇದರಲ್ಲಿ ನಮ್ಮ ಕೈವಾಡವೇನೂ ಇಲ್ಲ’ ಎಂದು ಹೇಳಿದರು.

ಇತಿಹಾಸತಜ್ಞ ರಾಮಚಂದ್ರ ಗುಹಾ,ನಟಿ ಕೊಂಕಣಾ ಸೇನ್ ಶರ್ಮಾ,ನಿರ್ದೇಶಕರಾದ ಮಣಿರತ್ನಂ,ಅಡೂರು ಗೋಪಾಲಕೃಷ್ಣನ್ ಮತ್ತು ಅಪರ್ಣಾ ಸೇನ್ ಮುಂತಾದವರು ಸೇರಿದಂತೆ ಈ ಗಣ್ಯರು ಜುಲೈನಲ್ಲಿ ಮೋದಿಯವರಿಗೆ ಬರೆದಿದ್ದ ಪತ್ರದಲ್ಲಿ,‘ಜೈ ಶ್ರೀರಾಮ ’ಘೋಷಣೆಯು ‘ಪ್ರಚೋದನಕಾರಿ ಯುದ್ಧದ ಕೂಗು ’ ಆಗಿ ಪರಿಣಮಿಸಿದೆ ಮತ್ತು ಗುಂಪುಗಳಿಂದ ಹಲವಾರು ಹತ್ಯೆಗಳಿಗೆ ಕಾರಣವಾಗಿದೆ ಎಂದು ತಿಳಿಸಿದ್ದರು. ಈಗ ಅವರ ವಿರುದ್ಧ ದೇಶದ ವರ್ಚಸ್ಸಿಗೆ ಮಸಿ ಬಳಿಯುತ್ತಿರುವ,ಪ್ರಧಾನಿಯವರ ಭಾರೀ ಸಾಧನೆಯನ್ನು ಕಡೆಗಣಿಸುತ್ತಿರುವ ಮತ್ತು ಪ್ರತ್ಯೇಕತಾವಾದಿ ಪ್ರವೃತ್ತಿಗಳನ್ನು ಬೆಂಬಲಿಸುತ್ತಿರುವ ಆರೋಪಗಳನ್ನು ಹೊರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News