ಆರೋಪಿಗಳ ಹೆಸರನ್ನು ಕೈಮೇಲೆ ಬರೆದು ಆತ್ಮಹತ್ಯೆಗೆ ಶರಣಾದ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ
ಮುಝಫ್ಫರ್‌ನಗರ, ಅ.6: ಪ್ರಕರಣವನ್ನು ಹಿಂದೆಗೆದುಕೊಳ್ಳುವಂತೆ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದವರು ಕಿರುಕುಳ ನೀಡಿದ ಬಳಿಕ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮುಝಫ್ಫರ್‌ನಗರದ ಗ್ರಾಮವೊಂದರಲ್ಲಿ ನಡೆದಿದೆ.
24ರ ಹರೆಯದ ಯುವತಿ ಶನಿವಾರ ಸಂಜೆ ಆತ್ಮಹತ್ಯೆಗೆ ಶರಣಾಗುವ ಮುನ್ನ ಆರೋಪಿಗಳ ಹೆಸರುಗಳನ್ನು ತನ್ನ ಕೈಮೇಲೆ ಬರೆದುಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು ಒಂದು ವರ್ಷದ ಹಿಂದೆ ಮೂವರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು ಮತ್ತು ಆಗಿನಿಂದಲೂ ಆರೋಪಿಗಳು ಜಾಮೀನಿನಲ್ಲಿದ್ದಾರೆ.
ತಮ್ಮ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಹಿಂದೆಗೆದುಕೊಳ್ಳುವಂತೆ ಆರೋಪಿಗಳು ತನ್ನ ಪುತ್ರಿಗೆ ಬೆದರಿಕೆಯೊಡ್ಡಿದ್ದರು ಮತ್ತು ಕಿರುಕುಳ ನೀಡುತ್ತಿದ್ದರು ಎಂದು ಯುವತಿಯ ತಂದೆ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಇನ್ನೊಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.