ಮಿಶ್ರ ಫಲಿತಾಂಶದೊಂದಿಗೆ ಭಾರತದ ಅಭಿಯಾನ ಅಂತ್ಯ

Update: 2019-10-06 18:19 GMT

ದೋಹಾ, ಅ.6: ಏಶ್ಯನ್ ಚಾಂಪಿಯನ್ ಗೋಪಿ ಥೋನಕಲ್ ರವಿವಾರ ಪುರುಷರ ಮ್ಯಾರಥಾನ್ ರೇಸ್‌ನಲ್ಲಿ 21ನೇ ಸ್ಥಾನ ಪಡೆದರು. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮಿಶ್ರ ಫಲಿತಾಂಶದೊಂದಿಗೆ ತನ್ನ ಅಭಿಯಾನ ಕೊನೆಗೊಳಿಸಿದೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 27 ಸದಸ್ಯರುಗಳನ್ನು ಒಳಗೊಂಡ ಭಾರತೀಯ ತಂಡ ಒಂದೂ ಪದಕ ಜಯಿಸಲು ಸಾಧ್ಯವಾಗಲಿಲ್ಲ. ಆದರೆ, ಈ ಬಾರಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡಿದೆ. ಮಿಕ್ಸೆಡ್ 4x400 ಮೀ.ರಿಲೇ, ಪುರುಷರ 3,000 ಮೀ. ಸ್ಟೀಪಲ್‌ಚೇಸ್ ಹಾಗೂ ಮಹಿಳೆಯರ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಭಾರತದ ಸ್ಪರ್ಧಿಗಳು ಫೈನಲ್ ತಲುಪಿದ್ದರು.

ಲಾಂಗ್‌ಜಂಪ್ ತಾರೆ ಅಂಜು ಬಾಬ್ಬಿ ಜಾರ್ಜ್ 2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದರು. ಇದು ಈಗಲೂ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಜಯಿಸಿರುವ ಏಕೈಕ ಪದಕವಾಗಿ ಉಳಿದಿದೆ. ಫೈನಲ್‌ಗೆ ತಲುಪಿದ ಭಾರತದ ಮೂವರು ಅಥ್ಲೀಟ್‌ಗಳ ಪೈಕಿ ಸ್ಟೀಪಲ್‌ಚೇಸರ್ ಅವಿನಾಶ್ ಸಬ್ಲೆ ಹಾಗೂ ಮಿಕ್ಸೆಡ್ 4x400 ಮೀ. ರಿಲೇ ತಂಡದ ಸದಸ್ಯರು ಟೋಕಿಯೊ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ಜಾವೆಲಿನ್ ಎಸೆತಗಾರ್ತಿ ಅನ್ನು ರಾಣಿ 8ನೇ ಸ್ಥಾನ ಪಡೆದಿದ್ದರು.

ಅನ್ನು ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಅವಿನಾಶ್ ಮೂರು ದಿನಗಳಲ್ಲಿ ಎರಡು ಬಾರಿ ತನ್ನದೇ ರಾಷ್ಟ್ರೀಯ ದಾಖಲೆ ಮುರಿದರು.

 ಬೀಜಿಂಗ್‌ನಲ್ಲಿ ನಡೆದಿದ್ದ 2015ರ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮೂವರು ಸ್ಪರ್ಧಾಳುಗಳು ಫೈನಲ್ ತಲುಪಿದ್ದರು. 2017ರಲ್ಲಿ ಲಂಡನ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕೇವಲ ಒಬ್ಬ ಅಥ್ಲೀಟ್ ಫೈನಲ್‌ಗೆ ತಲುಪಿದ್ದರು. ರವಿವಾರ ನಡೆದ ಮ್ಯಾರಥಾನ್ ಓಟದಲ್ಲಿ 31ರ ಹರೆಯದ ಗೋಪಿ 2 ಗಂಟೆ, 15 ನಿಮಿಷ, 57 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಸ್ಪರ್ಧೆಯನ್ನು ಪೂರ್ಣಗೊಳಿಸಿದ 55 ಓಟಗಾರರ ಪೈಕಿ 21ನೇ ಸ್ಥಾನ ಪಡೆದರು. ಓಟದ ಆರಂಭದಲ್ಲಿ 73 ಅಥ್ಲೀಟ್‌ಗಳಿದ್ದರು. 18 ಓಟಗಾರರು ಸ್ಪರ್ಧೆಯನ್ನು ಪೂರ್ಣಗೊಳಿಸಲು ವಿಫಲರಾದರು.

ಗೋಪಿ 2017ರಲ್ಲಿ ಚೀನಾದಲ್ಲಿ ನಡೆದ ಏಶ್ಯ ಮ್ಯಾರಥಾನ್‌ನಲ್ಲಿ 2:15.48 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದರು. ಮಾರ್ಚ್‌ನಲ್ಲಿ ಸಿಯೊಲ್‌ನಲ್ಲಿ ವೈಯಕ್ತಿಕ ಶ್ರೇಷ್ಠ ಸಮಯದಲ್ಲಿ(2:13:39)ಗುರಿ ತಲುಪಿದ್ದರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ 25ನೇ ಸ್ಥಾನ ಹಾಗೂ 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 28ನೇ ಸ್ಥಾನ ಪಡೆದಿದ್ದಾರೆ.

ಗೋಪಿ 2020ರ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳುವ ಗುರಿಯೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌ಗೆ ಪ್ರವೇಶಿಸಿದ್ದರು. ಆದರೆ, ಅರ್ಹತಾ ಸಮಯ(2:11.30) ತಲುಪಲು ವಿಫಲರಾದರು.

ಶನಿವಾರ ಭಾರತದ ಪುರುಷರ ಹಾಗೂ ಮಹಿಳಾ 4x 400 ಮೀ.ರಿಲೇ ತಂಡಗಳು ನಿರಾಶಾದಾಯಕ ಪ್ರದರ್ಶನ ನೀಡಿದವು. ಜಾವೆಲಿನ್ ಎಸೆತಗಾರ ಶಿವಪಾಲ್ ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಿಂದ ಬೇಗನೆ ನಿರ್ಗಮಿಸಿದರು. ಮಹಿಳೆಯರ ರಿಲೇಯಲ್ಲಿ ಜಿಸ್ನಾ ಮ್ಯಾಥ್ಯೂ, ಎಂ.ಆರ್. ಪೂವಮ್ಮ, ವಿ.ಕೆ. ವಿಸ್ಮಯಾ ಹಾಗೂ ವಿ. ಶುಭಾ 3 ನಿಮಿಷ, 29.42 ಸೆಕೆಂಡ್‌ನಲ್ಲಿ ಗುರಿ ತಲುಪಿ ಹೀಟ್-1ರಲ್ಲಿ ಆರನೇ ಹಾಗೂ ಮೊದಲ ಸುತ್ತಿನ ಹೀಟ್ಸ್‌ನಲ್ಲಿ 11ನೇ ಸ್ಥಾನ ಪಡೆದರು. ಫೈನಲ್ ತಲುಪಲು ವಿಫಲರಾದರು.

ಅಮೋಜ್ ಜೇಕಬ್, ಮುಹಮ್ಮದ್ ಅನಸ್, ಕೆ.ಸುರೇಶ್ ಜೀವನ್ ಹಾಗೂ ನೊಹಾ ನಿರ್ಮಲ್ ಟೊಮ್ ಒಳಗೊಂಡ ಭಾರತದ ರಿಲೇ ತಂಡ 3:03..09 ಸೆ.ನಲ್ಲಿ ಗುರಿ ತಲುಪಿ ಹೀಟ್-2ರಲ್ಲಿ 7ನೇ ಹಾಗೂ 16 ದೇಶಗಳ ಪೈಕಿ 13ನೇ ಸ್ಥಾನ ಪಡೆಯಿತು. ಅಥ್ಲೀಟ್‌ಗಳ ಕಳಪೆ ಪ್ರದರ್ಶನದಿಂದಾಗಿ ಫೈನಲ್‌ಗೆ ತಲುಪಿ ಪುರುಷರ ಹಾಗೂ ಮಹಿಳೆಯರ 4x

400 ರಿಲೇ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಅರ್ಹತೆ ಪಡೆಯುವ ಭಾರತದ ವಿಶ್ವಾಸವೂ ಕಮರಿಹೋಯಿತು. ಜಾವೆಲಿನ್ ಎಸೆತಗಾರ ಶಿವಪಾಲ್ ಅರ್ಹತಾ ಸುತ್ತಿನಲ್ಲಿ 24ನೇ ಸ್ಥಾನ ಪಡೆದು ಫೈನಲ್ ಸುತ್ತಿಗೆ ತಲುಪಲು ವಿಫಲರಾದರು. ಗ್ರೂಪ್ ‘ಎ’ ಅರ್ಹತಾ ಸುತ್ತಿನಲ್ಲಿ ಮೂರು ಪ್ರಯತ್ನದಲ್ಲಿ 78.97 ಮೀ. ದೂರ ಶ್ರೇಷ್ಠ ಪ್ರದರ್ಶನವಾಗಿತ್ತು. 24ರ ಹರೆಯದ ಶಿವಪಾಲ್ ಮೊದಲ ಯತ್ನದಲ್ಲಿ 75.91 ಮೀ. ಹಾಗೂ 2ನೇ ಯತ್ನದಲ್ಲಿ 78.97 ಮೀ.ದೂರಕ್ಕೆ ಜಾವೆಲಿನ್ ಎಸೆದರು. ಮೂರನೇ ಪ್ರಯತ್ನ ಪೌಲ್ ಆದ ಕಾರಣ ಶಿವಪಾಲ್ ಚಾಂಪಿಯನ್‌ಶಿಪ್‌ನಿಂದ ಹೊರ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News