ಸರಿತಾದೇವಿಗೆ ಸೋಲು

Update: 2019-10-06 18:21 GMT

ಮಾಸ್ಕೋ(ರಶ್ಯ), ಅ.6: ಮಾಜಿ ಚಾಂಪಿಯನ್ ಸರಿತಾದೇವಿ(60ಕೆಜಿ)ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರವಿವಾರ ರಶ್ಯದ ನಟಾಲಿಯಾ ಶಡ್ರಿನಾ ವಿರುದ್ಧ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿದರು.

ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ನಾಲ್ಕನೇ ಶ್ರೇಯಾಂಕದ ಸರಿತಾದೇವಿ ಕಳಪೆ ಆರಂಭಕ್ಕೆ ಬೆಲೆ ತೆತ್ತು 0-5 ಅಂತರದಿಂದ ಸೋಲನುಭವಿಸಿದರು.

ದಿನದ ಕೊನೆಯ ಬಾಕ್ಸಿಂಗ್ ಸ್ಪರ್ಧೆಯಲ್ಲೂ ಭಾರತ ನಿರಾಶೆ ಅನುಭವಿಸಿದ್ದು, ಚೊಚ್ಚಲ ಚಾಂಪಿಯನ್‌ಶಿಪ್ ಆಡುತ್ತಿರುವ ನಂದಿನಿ(81ಕೆಜಿ)ಜರ್ಮನಿಯ ಇರಿನಾ-ನಿಕೊಲೆಟ್ಟಾಗೆ ಯಾವುದೇ ರೀತಿಯಲ್ಲೂ ಸರಿಸಾಟಿಯಾಗದೆ 0-5 ಅಂತರದಿಂದ ಸೋತಿದ್ದಾರೆ.

2006ರಲ್ಲಿ ಹೊಸದಿಲ್ಲಿಯಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕೊನೆಯ ಬಾರಿ ಚಿನ್ನದ ಪದಕ ಜಯಿಸಿದ್ದ ಸರಿತಾ ಕಳೆದ 10ಕ್ಕೂ ಅಧಿಕ ವರ್ಷಗಳಿಂದ ವಿಶ್ವಮಟ್ಟದಲ್ಲಿ ಚೊಚ್ಚಲ ಪ್ರಶಸ್ತಿ ಬೇಟೆಯಲ್ಲಿದ್ದಾರೆ. ಹಲವು ಬಾರಿ ಏಶ್ಯನ್ ಚಾಂಪಿಯನ್ ಆಗಿರುವ ಮಣಿಪುರದ ಬಾಕ್ಸರ್ ಸರಿತಾ ಮೊದಲ 3 ನಿಮಿಷಗಳ ಆಟದಲ್ಲಿ ಹಿಡಿತ ಸಾಧಿಸಿದ್ದರು. ಮುಂದಿನ ಎರಡು ಸುತ್ತಿನಲ್ಲಿ ತಿರುಗಿ ಬಿದ್ದ ರಶ್ಯದ ಬಾಕ್ಸರ್ ಸರಿತಾಗೆ ಅಚ್ಚರಿಗೊಳಿಸಿದರು.

ಸವೀಟಿ ಬೂರಾ(75ಕೆಜಿ) ಹಾಗೂ ಜಮುನಾ ಬೋರೊ(54ಕೆಜಿ)ತಮ್ಮ ಮೊದಲ ಸ್ಪರ್ಧೆಯಲ್ಲಿ ಜಯ ಸಾಧಿಸಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News