ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಒತ್ತಾಯ: ಅ.10ರಂದು ನೆಲ್ಯಾಡಿಯಲ್ಲಿ ರಸ್ತೆತಡೆ, ಪ್ರತಿಭಟನೆ

Update: 2019-10-08 12:31 GMT

ಪುತ್ತೂರು: ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಗ್ರಾಮದ ಅಡ್ಡಹೊಳೆಯಿಂದ ಬಿ.ಸಿ.ರೋಡ್ ತನಕದ ರಸ್ತೆ ತೀರಾ ನಾದುರಸ್ತಿಯಲ್ಲಿ ಈ ರಸ್ತೆ ಯನ್ನು ಕೂಡಲೇ ಮರು ಡಾಮರುಗೊಳಿಸುವಂತೆ ಆಗ್ರಹಿಸಿ ಅ.10 ರಂದು ಪೂರ್ವಾಹ್ನ ನೆಲ್ಯಾಡಿಯಲ್ಲಿ ರಸ್ತೆ ತಡೆ, ಪ್ರತಿಭಟನೆ ನಡೆಸಲಾಗು ವುದು ಎಂದು ನೆಲ್ಯಾಡಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಫಾ. ವರ್ಗೀಸ್ ತಿಳಿಸಿದ್ದಾರೆ.

ಅವರು ಮಂಗಳವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಸ್ತೆ ಅವ್ಯವಸ್ಥೆಯಿಂದ ಜನಸಾಮಾನ್ಯರು ಸಾಕಷ್ಟು ಬವಣೆ ಪಡುತ್ತಿದ್ದಾರೆ. ಆದರೆ ಯಾರೂ ಸ್ಪಂದನೆ ಅಥವಾ ಪರಿಹಾರ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಅನಿವಾರ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿ 75 ಕೇಂದ್ರ ಸರಕಾರದಿಂದ ಚತುಷ್ಪತ ರಸ್ತೆಯಾಗಿ ಮಂಜೂರುಗೊಂಡು ಎಲ್ ಆ್ಯಂಡ್ ಟಿ ಸಂಸ್ಥೆಯವರಿಗೆ ರಸ್ತೆ ಅಭಿವೃದ್ಧಿಯ ಗುತ್ತಿಗೆಯನ್ನು ನೀಡಲಾಗಿತ್ತು. ಆದರೆ ಮೂರು ವರ್ಷಗಳಿಂದ ರಸ್ತೆಯನ್ನು ಅಗೆದು, ಹಲವು ಕಡೆಗಳಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ಆರಂಭಿಸಿ ಹಾಳುಗೆಡವಿ ಈಗ 6 ತಿಂಗಳಿನಿಂದ ಅರ್ಧದಲ್ಲೇ ಬಿಟ್ಟು ಸಾರ್ವಜನಿಕರು, ವಿದ್ಯಾರ್ಥಿಗಳು, ತುರ್ತು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಎಲ್ ಆ್ಯಂಡ್ ಟಿ ಕಂಪೆನಿ ಹಾಗೂ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದರೂ ಲೆಕ್ಕಿಸದೆ ಬೇಜವಾಬ್ದಾರಿಯಿಂದ ಹೆದ್ದಾರಿಯನ್ನು ಈ ದುಸ್ಥಿತಿಯಲ್ಲಿ ಇರಿಸಿದ್ದಾರೆ. ಗುಡ್ಡ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ಮಣ್ಣು ಅಗೆದ ಪರಿಣಾಮ ಗುಡ್ಡ ಕುಸಿತ ಹಾಗೂ ರಸ್ತೆ ಬದಿ ಮರಗಳು ಉರುಳಿ ಬೀಳುವ ಭೀತಿಯಿದೆ. ಹೆದ್ದಾರಿಯಲ್ಲಿ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳಿದ್ದು, ನಿತ್ಯ ಅಪಘಾತಗಳು ನಡೆಯುತ್ತಿವೆ.

ರಸ್ತೆಯನ್ನು ಕೂಡಲೇ ಮರುಡಾಮರುಗೊಳಿಸಬೇಕು. ತಪ್ಪಿದಲ್ಲಿ ಅಪಘಾತಗಳಿಂದ ಸಾವು ನೋವುಗಳು ಸಂಭವಿಸಿದರೆ ಕೇಂದ್ರ ಸರಕಾರ, ಹೆದ್ದಾರಿ ಪ್ರಾಧಿಕಾರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಸಮಸ್ಯೆಯ ಕುರಿತು ದ.ಕ. ಜಿಲ್ಲಾಧಿಕಾರಿ, ಸಂಬಂಧಪಟ್ಟ ಇಲಾಖೆಗಳು ಹಾಗೂ ಜನಪ್ರತಿನಿಧಿಗಳಿಗೆ ಸೆ. 30 ರೊಳಗೆ ಎಲ್ಲಾ ಮಾಹಿತಿಗಳನ್ನು ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಸಂಬಂಧಪಟ್ಟ ಹೆದ್ದಾರಿ ಇಲಾಖೆಯವರು ಸೇರಿದಂತೆ ಸಂಬಂಧಪಟ್ಟ ಎಲ್ಲರೂ ಸ್ಥಳಕ್ಕೆ ಆಗಮಿಸಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಈ ಪರಿಸರದ ಸುಮಾರು 23 ಕ್ಕೂ ಅಧಿಕ ಸಂಘ ಸಂಸ್ಥೆಗಳ ಸುಮಾರು 5 ಸಾವಿರ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಎಲ್ಲರೂ ಸೇರಿ ರ್ಯಾಲಿ ಮೂಲಕ ಸಾಗಿ ನೆಲ್ಯಾಡಿ ಪೇಟೆಯಲ್ಲಿ ಸುಮಾರು 1 ಗಂಟೆಗಳ ಕಾಲ ರಸ್ತೆ ತಡೆ ಪ್ರತಿಭಟನೆ ನಡೆಯಲಿದೆ. ಸಮರ್ಪಕ ಉತ್ತರ ಸಿಕ್ಕದೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಕಾರ್ಯದರ್ಶಿ ಜೋಸ್ ಕೆ.ಜೆ., ಸದಸ್ಯ ಫಾ. ಆದರ್ಶ್ ಜೋಸೆಫ್, ನೆಲ್ಯಾಡಿ ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ., ನೆಲ್ಯಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಕರ್ನಾಟಕ ನೀತಿ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಪ್ರಮೋದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News