ಸಮಷ್ಠಿಯ ಹಿತಕ್ಕಾಗಿ ಸಂಸ್ಥೆಗಳು ಶ್ರಮಿಸಲಿ: ಅದಮಾರುಶ್ರೀ

Update: 2019-10-08 15:38 GMT

ಉಡುಪಿ, ಅ.8: ಯಾವುದೇ ಸಂಸ್ಥೆ ವ್ಯಕ್ತಿ ನಿಷ್ಟವಾಗಿರದೇ ಸಮಿಷ್ಟೆಯ ಏಳಿಗೆಗೆ ಶ್ರಮಿಸಬೇಕು. ಈ ಮನೋಭಾವ ಎಲ್ಲರಲ್ಲೂ ಸ್ಪುರಣೆಗೊಳ್ಳಬೇಕು. ಆಗ ಆ ಸಂಸ್ಥೆ ಮಾದರಿಯಾಗಿರುತ್ತದೆ ಎಂದು ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ರವಿವಾರ ನಡೆದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅನುಗ್ರಹ ಸಂದೇ ನೀಡಿ ಅವರು ಮಾತನಾಡುತಿದ್ದರು.

‘ನಮ್ಮ ಸನಾತನ ಧರ್ಮದ ಮುಖ್ಯ ಆಶಯ ನಮಗೆಲ್ಲ ಒಳಿತಾಗಲಿ-ಸದ್ಬುದ್ಧಿ ಕರುಣಿಸುವಂತಾಗಲಿ ಎಂಬುದಾಗಿತ್ತೆ ಹೊರತು ನನಗೆ ಮಾತ್ರ, ನಾನು ಮಾತ್ರ ಎಂಬ ಸ್ವಾರ್ಥ ಪರವಾದ ಚಿಂತನೆಯನ್ನು ಬೋಧಿಸಲಿಲ್ಲ. ಈ ಹಿನ್ನಲೆಯಲ್ಲಿ ಹಳೆವಿದ್ಯಾರ್ಥಿ ಸಂಘದ ಚಟುವಟಿಕೆಗಳೂ ಆದರ್ಶಪ್ರಾಯವಾಗಿದೆ ಎಂದರು.

ಸಂಘದ ಅಧ್ಯಕ್ಷ ಡಾ. ಬಿ. ಎಂ ಸೋಮಯಾಜಿ ಎಲ್ಲರನ್ನು ಸ್ವಾಗತಿಸಿ ಸಂಸ್ಥೆಯ ಕಾರ್ಯ ಚಟುವಟಿಕೆ ಮತ್ತು ಮುಂದಿನ ಯೋಜನೆಗಳನ್ನು ವಿವರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ವರದಿ ಮಂಡಿಸಿದರು. ಎಂ. ನಾಗರಾಜ್ ಹೆಬ್ಬಾರ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.

ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಜಿ.ಎಸ್.ಚಂದ್ರಶೇಖರ್, ಕಾಲೇಜಿನ ಪ್ರಾಂಶುಪಾಲ ಡಾ. ಎ.ರಾಘವೇಂದ್ರ, ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ವಿಮಲ ಚಂದ್ರಶೇಖರ್ ಮತ್ತು ಎಂ.ಅಡ್ಯಂತಾಯ ಉಪಸ್ಥಿತರಿದ್ದರು.

ಡಾ.ಸುರೇಶ್ ಮಯ್ಯ, ಡಾ.ಎಂ.ಆರ್. ಹೆಗಡೆ, ವಿದ್ಯಾವಂತ ಆಚಾರ್ಯ, ಈಶ್ವರ ಚಿಟ್ಪಾಡಿ, ಪದ್ಮ ಕಿಣಿ ಮುಂತಾದವರು ಸಂಸ್ಥೆಯ ಚಟುವಟಿಕೆಗಳ ಬಗೆಗೆ ಸಲಹೆ ಸೂಚನೆಗಳನ್ನಿತ್ತರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News