ಭಟ್ಕಳ : ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಮುಂದಾಳು ಸಯ್ಯದ್ ಅಬ್ದುಲ್ಲಾ ಲಂಕಾ ನಿಧನ

Update: 2019-10-09 05:47 GMT

ಭಟ್ಕಳ, ಅ. 9 : ಭಟ್ಕಳದ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಮುಂದಾಳು, ಕೊಡುಗೈ ದಾನಿ ಸಯ್ಯದ್ ಅಬ್ದುಲ್ಲಾ ಲಂಕಾ ಅವರು ಬುಧವಾರ ಮುಂಜಾನೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. 

ಭಟ್ಕಳದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ಇದಾರ ತರ್ಬಿಯತೆ ಇಖ್ವಾನ್ ನ ಕಾರ್ಯಕಾರಿ ಸಮಿತಿ ಸದಸ್ಯ ಹಾಗು ಪೋಷಕರಾಗಿದ್ದ ಅಬ್ದುಲ್ಲಾ ಲಂಕಾ ಅವರು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗು ಬಹುಮಾನಗಳ ರೂಪದಲ್ಲಿ ಪ್ರೋತ್ಸಾಹ ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದರು.

ಸರಳ, ಸಜ್ಜನ ವ್ಯಕ್ತಿತ್ವದ ಅಬ್ದುಲ್ಲಾ ಅವರು ಭಟ್ಕಳದ ಸಾಮಾಜಿಕ, ಧಾರ್ಮಿಕ , ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ, ಅವುಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು.

" ಪ್ರತಿಬಾರಿ ಎಸೆಸ್ಸೆಲ್ಸಿ  ಪರೀಕ್ಷೆಗೆ ಮೊದಲು ಶಾಲೆಗೆ ಬಂದು ಉತ್ತಮ ಫಲಿತಾಂಶ ಬಂದರೆ ಇಂತಹ ಬಹುಮಾನ ಕೊಡುತ್ತೇನೆ ಎಂದು ಘೋಷಿಸಿ ವಿದ್ಯಾರ್ಥಿಗಳು , ಶಿಕ್ಷಕರನ್ನು ಹುರಿದುಂಬಿಸುತ್ತಿದ್ದರು " ಎಂದು ಇಲ್ಲಿನ ಶಮ್ಸ್ ಶಾಲೆಯ ಹಳೆ ವಿದ್ಯಾರ್ಥಿಯೊಬ್ಬರು ಅಬ್ದುಲ್ಲಾ ಲಂಕಾ ಅವರನ್ನು ಸ್ಮರಿಸಿದರು.

ನವಾಯತ್ ಸಂಸ್ಕೃತಿ , ಪರಂಪರೆ ಹಾಗು ಸಾಹಿತ್ಯವನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ನವಾಯತ್ ಮೆಹಫಿಲ್ ನ ಅಧ್ಯಕ್ಷರಾಗಿಯೂ ಅಬ್ದುಲ್ಲಾ ಲಂಕಾ ಅವರು ಸೇವೆ ಸಲ್ಲಿಸಿದ್ದಾರೆ. ಬಡ್ಡಿ ರಹಿತ ಸಾಲ ನೀಡುವ ಇಸ್ಲಾಮಿಕ್ ಬ್ಯಾಂಕ್ ನಡೆಸುವ ಸಂಸ್ಥೆ ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯದಿಂದ ಸಾರ್ವಜನಿಕ ಜೀವನದಲ್ಲಿ ಅವರು ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅವರು ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತಿಮ ಸಂಸ್ಕಾರ ಬುಧವಾರ ಮಧ್ಯಾಹ್ನ ನಮಾಝ್ ಬಳಿಕ ತಂಝೀಮ್ ಮಿಲ್ಲಿಯ ಮಸೀದಿ ವಠಾರದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News